
ಧಾರವಾಡ,ಜು.೧೫: ಚಿರಾಯು ಆಸ್ಪತ್ರೆಯ ಅರವಳಿಕೆ ತಜ್ಞ ಕಿರಣ್ ಹೊನ್ನಣ್ಣನವರ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕರ್ನಾಟಕ ವಿಶ್ವವಿದ್ಯಾಲಯ ರಸ್ತೆಯ ರನ್ಕಾಸ್ಟೆಲ್ಲೋ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಅವರ ೧೦ ವರ್ಷದ ಮಗ ನಿಹಿಲ್ ನ ಮೇಲೂ ಹಲ್ಲೆ ನಡೆಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಾರ್ಟ್‌ಮೆಂಟ್‌ಗೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಘಟನೆ ಸಂಬಂಧ ಡಾ.ಕಿರಣ್ ಪತ್ನಿ ಡಾ.ಪ್ರಿಯಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸದ್ಯ ಡಾ.ಕಿರಣ್ ಅವರನ್ನು ಪತ್ನಿ ಪ್ರಿಯಾಂಕಾಳೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು,ಪತಿ ಕೊಂದ ಬಳಿಕ ಮಗನ ಮೇಲೂ ಹಲ್ಲೆ ನಡೆದಿದೆ. ಬಳಿಕ ಡಾ.ಪ್ರಿಯಾಂಕಾ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ಅನುಮಾನಗಳ ವ್ಯಕ್ತವಾಗಿವೆ.
ಇನ್ನು ತಾನೇ ಕೊಲೆ ಮಾಡಿರುವುದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಹುಬ್ಬಳ್ಳಿಯ ಕಿಮ್ಸ್?ನಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗ್ತಿದೆ. ಕೊಲೆ ಬಳಿಕ ಆಕೆ ತಾನೂ ಇನ್ಸುಲಿನ್ ಚುಚ್ಚಿಕೊಂಡಿದ್ದ ಕಾರಣ ಲೋ ಶುಗರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.ಇದೀಗ ಪ್ರಿಯಾಂಕಾ ಆರೋಗ್ಯ ಸ್ಥಿರವಾಗಿದ್ದು, ಶುಗರ್ ಏರುಪೇರು ಬಿಟ್ಟರೆ ಬೇರೆ ಸಮಸ್ಯೆ ಇಲ್ಲ. ಮಾನಸಿಕ ಅಥವಾ ಇತರ ಯಾವುದೇ ಕಾಯಿಲೆ ಬಗ್ಗೆ ಮಾಹಿತಿ ಲಭ್ಯವಿಲ್ಲ ಎಂದು ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಈಶ್ವರ್ ಹಸಬಿ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಸಂಬಂಧಿಕರು ಫೋನ್ ಮಾಡಿದಾಗ ಪತಿ ರೆಸ್ಟ್ ಮಾಡುತ್ತಿದ್ದಾರೆ ಎಂದು ಪತ್ನಿ ಪ್ರಿಯಾ ಹೇಳಿದ್ದಾರೆ. ಡಾ.ಕಿರಣ್ ಚಿರಾಯು ಆಸ್ಪತ್ತೆಯಲ್ಲಿ ಅನಸ್ತೇಶಿಯಾ ತಜ್ಞರಾಗಿದ್ದರೆ, ಪತ್ನಿ ನೇತ್ರ ವೈದ್ಯೆಯಾಗಿದ್ದರು. ಸಂಜೆಯವರೆಗೂ ಫೋನ್ ಸ್ವೀಕರಿಸದೇ ಇದ್ದಾಗ ಅನುಮಾನದಿಂದ ಸಂಬಂಧಿಕರು ಮನೆಗೆ ಬಂದು ನೋಡಿದಾಗ, ರಕ್ತದ ಮಡುವಿನಲ್ಲಿ ಅವರು ಬಿದ್ದಿರೋದು ಕಂಡಿದೆ.ಗಾಯಗೊಂಡಿರುವ ಬಾಲಕನಿಗೆ ಜೀವ ಇದ್ದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಾರ್ಟ್‌ಮೆಂಟ್‌ಗೆ ಭದ್ರತೆ ಇರುವ ಕಾರಣ ಇಲ್ಲಿ ಬೇರೆಯವರು ಬಂದು ಕೊಲೆ ಮಾಡೋದು ಸಾಧ್ಯವಿಲ್ಲ. ಘಟನೆಗೆ ಸರಿಯಾದ ಕಾರಣ ಕೂಡ ಇನ್ನೂ ಗೊತ್ತಾಗಿಲ್ಲ. ಪ್ರಿಯಾಂಕಾ ಆಘಾತದಲ್ಲಿ ಏನೇನೋ ಹೇಳುತ್ತಿದ್ದು, ಅಸಲಿಗೆ ಏನಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಇದೇ ವೇಳೆ ಡಾ.ಕಿರಣ್ ಹೊನ್ನಣ್ಣನವರ್ ಮತ್ತು ಪ್ರಿಯಾಂಕಾ ಪ್ರೀತಿಸಿ ಮದುವೆಯಾಗಿದ್ದರು. ತಮ್ಮ ಮೊದಲ ಪತ್ನಿ ಮತ್ತು ಪತಿಯಿಂದ ವಿಚ್ಛೇದನ ಪಡೆದಿದ್ದ ಇವರಿಗೆ ಮ್ಯಾಟ್ರಿಮೋನಿ ಮೂಲಕ ಪರಿಚಯ ಆಗಿತ್ತು. ಬಳಿಕ ಇಬ್ಬರೂ ಎರಡನೇ ವಿವಾಹ ಆಗಿದ್ದರು. ಆದರೆ ಪತಿ ಮೇಲೆ ಪ್ರಿಯಾಂಕಾ ನಿರಂತರವಾಗಿ ಅನುಮಾನಪಡುತ್ತಿದ್ದ ಕಾರಣ, ದಂಪತಿ ನಡುವೆ ಆಗಾಗ ಜಗಳ ಆಗುತ್ತಿತ್ತು.ಈ ನಡುವೆ ಕಿರಣ್ ಹೊನ್ನಣ್ಣನವರ್ ಅವರನ್ನು ನಿನ್ನೆ ಬೆಳಗ್ಗೆ ಚಾಕುವಿನಿಂದ ಇರಿದು ಪ್ರಿಯಾಂಕಾ ಕೊಲೆ ಮಾಡಿದ್ದಾರೆ. ಬಳಿಕ ಬಳಿಕ ಪುತ್ರ ನಿಹಿಲ್‌ಗೆ ೨ ಕಡೆ ಚಾಕುವಿನಿಂದ ಇರಿದಿದ್ದಾರೆ. ಮನೆಗೆ ಹೋದಾಗ ಬಾಲಕ ಉಸಿರಾಡುವುದನ್ನು ಗಮನಿಸಿದ್ದ ಪೊಲೀಸರು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ನಿಹಿಲ್‌ಗೆ ಚಿಕಿತ್ಸೆ ಮುಂದುವರಿದಿದೆ.
































