Home ಮುಖಪುಟ ಸುದ್ದಿ ಇರಾನ್ ಮೇಲೆ ಅಮೆರಿಕ ವಾಯು ದಾಳಿ: ೩೭ ಮಂದಿ ಸಾವು

ಇರಾನ್ ಮೇಲೆ ಅಮೆರಿಕ ವಾಯು ದಾಳಿ: ೩೭ ಮಂದಿ ಸಾವು

ಟೆಹ್ರಾನ್/ವಾಷಿಂಗ್ಟನ್.ಜು.೧೬:ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮತ್ತೆ ಜೋರಾಗಿದೆ. ಇರಾನ್ ಮೇಲಿನ ನೌಕಾ ದಿಗ್ಬಂಧನವನ್ನು ಪುನರಾರಂಭಿಸಿರುವ ಅಮೆರಿಕ, ತನ್ನ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ. ಅಮೆರಿಕ ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ ೩೫ ಜನರು ಸಾವನ್ನಪ್ಪಿದ್ದು, ದಾಳಿಯಲ್ಲಿ ೭೨ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಹೊಸೈನ್ ಕೆರ್ಮನ್‌ಪುರ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ, ತೈಲ ಸಾಗಣೆಯ ಜಾಗತಿಕ ಜೀವನಾಡಿಯಾಗಿರುವ ಪರ್ಷಿಯನ್ ಕೊಲ್ಲಿಯಿಂದ ಇತರ ದೇಶಗಳ ಇಂಧನ ರಫ್ತನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಚ್ಚರಿಕೆ ನೀಡಿದೆ.
ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾದೇಶಿಕ ಭದ್ರತೆಯ ಕುರಿತು ಮಾತುಕತೆ ನಡೆಸಲು ೬೦ ದಿನಗಳ ಅವಧಿಗೆ ಉಭಯ ದೇಶಗಳ ನಡುವೆ ತಾತ್ಕಾಲಿಕ ಕದನ ವಿರಾಮ ಘೋಷಿಸಲಾಗಿತ್ತು. ಅಮೆರಿಕ ಕಳೆದ ತಿಂಗಳಷ್ಟೇ ತನ್ನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಿತ್ತು.

ಆದರೆ, ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸಿದ ಹಡಗುಗಳ ಮೇಲಿನ ದಾಳಿಯಿಂದಾಗಿ ಈ ಶಾಂತಿ ಪ್ರಕ್ರಿಯೆ ಸಂಪೂರ್ಣ ಮುರಿದುಬಿದ್ದಿದ್ದು, ಅಮೆರಿಕ ಮತ್ತೆ ದಿಗ್ಬಂಧನವನ್ನು ಜಾರಿಗೆ ತಂದಿದೆ. ಅಮೆರಿಕದ ಇತ್ತೀಚಿನ ದಾಳಿಯಲ್ಲಿ ಇರಾನ್ ಸೇನಾ ಬ್ಯಾರಕ್‌ಗಳು ಧ್ವಂಸಗೊಂಡಿದ್ದು, ನೂರಾರು ಜನ ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿಯಲ್ಲಿ ಅತ್ಯಂತ ಕಠಿಣ ನಿಯಂತ್ರಣ ಸಾಧಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ ಹಗಲು-ರಾತ್ರಿ ನಿರಂತರ ದಾಳಿಗಳನ್ನು ನಡೆಸುತ್ತಿದೆ. ಈ ಭಾಗದಲ್ಲಿ ಅತ್ಯಂತ ಪ್ರಮುಖ ತಾಣವಾಗಿರುವ ’ಗ್ರೇಟರ್ ಟನ್ಬ್’ ದ್ವೀಪದಲ್ಲಿನ ಇರಾನ್ ಕ್ಷಿಪಣಿ ತಾಣ ಹಾಗೂ ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ದಾಳಿ ನಡೆಸಿದೆ. ೧೯೭೧ ರಿಂದಲೂ ಗ್ರೇಟರ್ ಟನ್ಬ್, ಲೆಸ್ಸರ್ ಟನ್ಬ್ ಮತ್ತು ಅಬು ಮೂಸಾ ದ್ವೀಪಗಳು ಇರಾನ್ ನಿಯಂತ್ರಣದಲ್ಲಿದ್ದರೂ, ಯುಎಇ ಇವುಗಳ ಮೇಲೆ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸುತ್ತಾ ಬಂದಿದೆ.ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಹೊರ್ಮುಜ್ ಜಲಸಂಧಿಯ ಮೂಲಕವೇ ಹಾದುಹೋಗುತ್ತದೆ.

ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ ೧೫ ಕ್ಕಿಂತಲೂ ಅಧಿಕ ಜಿಗಿತ ಕಂಡಿದ್ದು, ಬ್ರೆಂಟ್ ಕ್ರೂಡ್ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ೮೫ ಡಾಲರ್ ದಾಟಿದೆ.ಇರಾನ್ ಎಚ್ಚರಿಕೆ: “ಈ ವಲಯದಿಂದ ತೈಲ ಮತ್ತು ಅನಿಲ ರಫ್ತು ನಡೆಯುವುದಾದರೆ ಅದು ಎಲ್ಲರಿಗೂ ಮುಕ್ತವಾಗಿರಬೇಕು, ಇಲ್ಲದಿದ್ದರೆ ಯಾರಿಗೂ ರಫ್ತು ಮಾಡಲು ಬಿಡುವುದಿಲ್ಲ.” – ಇರಾನ್ ರೆವಲ್ಯೂಷನರಿ ಗಾರ್ಡ್ ಅಮೆರಿಕವು ಬಲವಂತವಾಗಿ ಈ ಜಲಸಂಧಿಯನ್ನು ಮುಕ್ತವಾಗಿಡಲು ಯತ್ನಿಸಿದರೆ, ಅದಕ್ಕೆ ಬೃಹತ್ ನೌಕಾಪಡೆ ಮತ್ತು ಹತ್ತಾರು ಸಾವಿರ ಸೈನಿಕರ ನಿಯೋಜನೆ ಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಇರಾನ್ ಮೇಲೆ ಆರ್ಥಿಕ ಮತ್ತು ಮಿಲಿಟರಿ ಒತ್ತಡ ಹೇರಲು ಅಮೆರಿಕ ಈ ನೌಕಾ ದಿಗ್ಬಂಧನದ ಮಾರ್ಗವನ್ನು ಆಯ್ದುಕೊಂಡಿದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ತೈಲ ದಾಸ್ತಾನು ಈಗಾಗಲೇ ಕುಸಿದಿರುವುದರಿಂದ ಯುದ್ಧ ಹೀಗೆಯೇ ಮುಂದುವರಿದರೆ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ.