Home ಮುಖಪುಟ ಸುದ್ದಿ ವಿಧ್ವಂಸಕ ಕೃತ್ಯಕ್ಕೆ ಸಂಚು ಶಂಕಿತ ಉಗ್ರರಿಬ್ಬರ ಸೆರೆ

ವಿಧ್ವಂಸಕ ಕೃತ್ಯಕ್ಕೆ ಸಂಚು ಶಂಕಿತ ಉಗ್ರರಿಬ್ಬರ ಸೆರೆ

ಬೆಂಗಳೂರು, ಸೆ.೨೫: ದೇಶದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಚು ರೂಪಿಸಿದ ಇಬ್ಬರು ಶಂಕಿತ ಉಗ್ರರರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ಶಬ್ಬೀರ್ ಹಾಗೂ ಉತ್ತರ ಭಾರತ ಮೂಲದ ಸಲ್ಮಾನ್ ಬಂಧಿತ ಶಂಕಿತ ಉಗ್ರರಾಗಿದ್ದು,ಇಬ್ಬರನ್ನು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.

ಆರೋಪಿಗಳು ಟೆಲಿಗ್ರಾಂನಲ್ಲಿ ಗುಂಪೊಂದನ್ನು ರಚಿಸಿಕೊಂಡು ಭಯೋತ್ಪಾದನೆ ಹಾಗೂ ವಿಧ್ವಂಸಕ ಕೃತ್ಯಗಳ ಕುರಿತು ಚರ್ಚೆ ನಡೆಸುತ್ತಿದ್ದರು. ಶ್ರೀಮಂತರನ್ನು ಅಪಹರಿಸಿ ಹಣ ಸಂಗ್ರಹಿಸಿ, ಆ ಹಣವನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸುವ ಬಗ್ಗೆ ಗುಂಪಿನಲ್ಲಿ ಚರ್ಚೆ ನಡೆದಿತ್ತು ಎಂದು ತಿಳಿಸಿದ್ದಾರೆ.


ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ವಿವಿಧ ರೀತಿಯ ದಾಳಿ ನಡೆಸುವ ಕುರಿತು ಆರೋಪಿಗಳು ಪ್ರತಿದಿನ ಟೆಲಿಗ್ರಾಂ ಗುಂಪಿನಲ್ಲಿ ಚರ್ಚಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಕುರಿತು ಚರ್ಚೆ ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ದೇಶದ ವಿವಿಧ ಭಾಗಗಳ ಹಲವು ಮಂದಿ ಈ ಟೆಲಿಗ್ರಾಂ ಗುಂಪಿನ ಸದಸ್ಯರಾಗಿದ್ದರು ಎನ್ನಲಾಗಿದ್ದು, ಅವರ ಗುರುತು ಹಾಗೂ ಸಂಪರ್ಕದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಸಂಚಿನ ಹಿಂದೆ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.


ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ ಎಸ್) ಸೆಕ್ಷನ್ ೧೧೩ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿ ಪೊಲೀಸರು, ಟೆಲಿಗ್ರಾಂ ಗುಂಪಿನ ಚಟುವಟಿಕೆಗಳು, ಸದಸ್ಯರ ಸಂಪರ್ಕ ಹಾಗೂ ಸಂಚಿನ ಸ್ವರೂಪದ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.