Home ಮುಖಪುಟ ಸುದ್ದಿ ನಾಗಲ್ಯಾಂಡ್ ನಲ್ಲಿ ನಕಲಿ ಮದ್ಯ ಸೇವಿಸಿ ೧೯ ಮಂದಿ ಸಾವು

ನಾಗಲ್ಯಾಂಡ್ ನಲ್ಲಿ ನಕಲಿ ಮದ್ಯ ಸೇವಿಸಿ ೧೯ ಮಂದಿ ಸಾವು

ಕೊಹಿಮಾ, ಸೆ.೨೬: ನಕಲಿ ಅಥವಾ ಕಲಬೆರಕೆ ಮದ್ಯ ಸೇವಿಸಿದ ಶಂಕೆಯಲ್ಲಿ ನಾಗಾಲ್ಯಾಂಡ್‌ನಲ್ಲಿ ಎರಡು ದಿನಗಳ ಅವಧಿಯಲ್ಲಿ ೧೯ ಮಂದಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದು, ಮದ್ಯದ ಮೂಲ ಮತ್ತು ಪೂರೈಕೆ ಜಾಲದ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಮೋಕೊಕ್ಚುಂಗ್ ಜಿಲ್ಲೆಯಲ್ಲಿ ೮ ಮಂದಿ, ತುಯೆನ್ಸಾಂಗ್ ಜಿಲ್ಲೆಯಲ್ಲಿ ೧೧ ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ತಿಳಿಸಿದ್ದಾರೆ.

ಮದ್ಯ ಸೇವನೆಯಿಂದಲೇ ಸಾವು ಸಂಭವಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೃತರ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹತಿಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಕೆಲವು ಸುಳಿವುಗಳು ಲಭ್ಯವಾಗಿದ್ದು, ಈ ಹಂತದಲ್ಲಿ ಹೆಚ್ಚಿನ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಬಳಿಕ ಪೊಲೀಸರು ವಿವಿಧೆಡೆ ದಾಳಿ ನಡೆಸಿ ೧೯ ಮಂದಿಯನ್ನು ಬಂಧಿಸಿದ್ದು, ಸುಮಾರು ೩,೦೦೦ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
೧೯೯೦ರಿಂದಲೇ ನಾಗಾಲ್ಯಾಂಡ್‌ನಲ್ಲಿ ಮದ್ಯನಿಷೇಧ ಕಾನೂನು ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಅಕ್ರಮವಾಗಿ ಮಾರಾಟವಾಗುವ ಹಾಗೂ ಕಲಬೆರಕೆಯ ಮದ್ಯದ ಪೂರೈಕೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಾಗಾಲ್ಯಾಂಡ್‌ನಲ್ಲಿ ೨ ದಿನಗಳಲ್ಲಿ ೧೯ ಮಂದಿ ಸಾವು
ಮೋಕೊಕ್ಚುಂಗ್‌ನಲ್ಲಿ ೮, ತುಯೆನ್ಸಾಂಗ್‌ನಲ್ಲಿ ೧೧ ಸಾವು
ತನಿಖೆಗೆ ಎಸ್‌ಐಟಿ ರಚನೆ
೧೯ ಮಂದಿ ಬಂಧನ, ೩ ಸಾವಿರ ಬಾಟಲಿ ಮದ್ಯ ವಶ
ಮದ್ಯದ ಮಾದರಿಗಳನ್ನು ಗುವಾಹತಿಗೆ ವಿಧಿವಿಜ್ಞಾನ ಪರೀಕ್ಷೆಗೆ ರವಾನೆ
ಗುರುತು ಇಲ್ಲದ ಅಥವಾ ಶಂಕಾಸ್ಪದ ಮದ್ಯ ಸೇವಿಸದಂತೆ ಪೊಲೀಸರ ಎಚ್ಚರಿಕೆ