Home ಸುದ್ದಿ ರಾಷ್ಟ್ರೀಯ ಗಣೇಶ ಪೆಂಡಾಲ್‌ಗೆ ಬೆಂಕಿ: ನಾಲ್ವರ ಸಾವು

ಗಣೇಶ ಪೆಂಡಾಲ್‌ಗೆ ಬೆಂಕಿ: ನಾಲ್ವರ ಸಾವು

ಮಾಂಡ್ಲಾ,ಸೆ.೨೬-ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ನೈನ್‌ಪುರ ತಾಲೂಕಿನ ಹಿರಾಪುರ ಗ್ರಾಮದಲ್ಲಿ ಶನಿವಾರ ಮುಂಜಾನೆ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಣೇಶ ಮೂರ್ತಿ ವಿಸರ್ಜನೆಯ ನಂತರ ಪೆಂಡಾಲ್‌ನಲ್ಲಿ ನಿದ್ರಿಸುತ್ತಿದ್ದ ಯುವಕರ ಮೇಲೆ ವಿದ್ಯುತ್ ತಂತಿಯೊಂದು ಹರಿದು ಬಿದ್ದು, ವಿದ್ಯುತ್ ಪ್ರವಾಹದಿಂದಾಗಿ ನಾಲ್ವರು ಯುವಕರು ದಾರುಣವಾಗಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಬೆಳಗಿನ ಜಾವ ಸುಮಾರು ೫:೦೦ ರಿಂದ ೫:೩೦ ರ ವೇಳೆಗೆ ಈ ಭೀಕರ ಅಪಘಾತ ಸಂಭವಿಸಿದೆ. ಹಿರಾಪುರ ಗ್ರಾಮದ ಗಣೇಶ ಮಂಚ್ ಪೆಂಡಾಲ್‌ನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮುಗಿದ ನಂತರ ಏಳರಿಂದ ಎಂಟು ಯುವಕರು ವಿಶ್ರಾಂತಿ ಪಡೆಯಲು ಅಲ್ಲಿಯೇ ಮಲಗಿದ್ದರು. ಈ ಸಮಯದಲ್ಲಿ ವಿದ್ಯುತ್ ಕಂಬ ಹಾಗೂ ಮೀಟರ್ ಸಂಪರ್ಕದ ಬಳಿಯಿದ್ದ ಮುಖ್ಯ ವಿದ್ಯುತ್ ತಂತಿಯೊಂದು ತುಂಡಾಗಿ ನೇರವಾಗಿ ಪೆಂಡಾಲ್‌ನಲ್ಲಿದ್ದ ಯುವಕರ ಮೇಲೆ ಬಿದ್ದಿದೆ.

ವಿದ್ಯುತ್ ಆಘಾತದ ತೀವ್ರತೆಗೆ ನಿದ್ರೆಯಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ವಿದ್ಯುತ್ ಆಘಾತದಿಂದ ಜೈನು ಭವಾರೆ (೧೯), ರವಿ ಝರಿಯಾ (೨೪), ಕೃಷ್ಣ ಕುಮಾರ್ ಭವಾರೆ (೧೮) ಹಾಗೂ ವೀರೇಂದ್ರ ಭವಾರೆ (೨೪) ಎಂಬ ನಾಲ್ವರು ಯುವಕರು ಅಕಾಲಿಕ ಮರಣಕ್ಕೊಳಗಾಗಿದ್ದಾರೆ.

?ಘಟನೆಯಲ್ಲಿ ಗಾಯಗೊಂಡ ಮೂವರ ಪೈಕಿ ಪ್ರಿಯಾಂಶು ಎಂಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಗಾಯಾಳುಗಳಿಗೆ ನೈನ್‌ಪುರದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ : ತನಿಖೆ ಆರಂಭ:
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ನೈನ್‌ಪುರ ಪೊಲೀಸ್ ಠಾಣೆಯ ಸಿಬ್ಬಂದಿ, ವಿದ್ಯುತ್ ಸರಬರಾಜು ಕಂಪನಿಯ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದವು. ನೈನ್‌ಪುರ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಶುತೋಷ್ ಠಾಕೂರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, “ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.