
ಕೋಲಾರ,ಸೆ.೭-ರಾಜ್ಯದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ತಿರುಪತಿ ದರ್ಶನ ಮುಗಿಸಿ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಸಂಭವಿಸಿದ ಕಾರು ಪಲ್ಟಿ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ,ಮತ್ತೊಂದು ಅಪಘಾತದಲ್ಲಿ ಹೂವು ಕಟಾವಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಓಮ್ನಿ ಕಾರು ಮಿನಿ ಗೂಡ್ಸ್ ಗೆ ಡಿಕ್ಕಿ ಹೊಡೆದು ಮೂವರು ಮಹಿಳೆಯರು
ಸಾವನ್ನಪ್ಪಿದ್ದಾರೆ.
ನಾಲ್ವರು ದುರ್ಮರಣ
ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಗಳೂರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದಾರುಣ ಘಟನೆ ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಬಳಿ ನಡೆದಿದೆ.
ಬೆಂಗಳೂರಿನ ವಿದ್ಯಾರಣ್ಯಪುರ ಮೂಲದ ಶಾರದಮ್ಮ(೭೦), ದೀಕ್ಷಿತ (೨೫), ದೇವೆಂದ್ರ ಕುಮಾರ್, (೪೧) ಜಿಷ್ಣು (೧೩) ಮೃತಪಟ್ಟವರು.ಗಾಯಗೊಂಡಿರುವ ವಿಕಾಸ್, ನೀತು, ಆದ್ವಿಕ ಸೇರಿ ಮೂವರನ್ನು ಬಂಗಾರಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಅವರಲ್ಲಿ ಒಬ್ಬರು ಸ್ಥಿತಿ ಗಂಭೀರವಾಗಿದೆ.
ತಿಮ್ಮಪ್ಪನ ದರ್ಶನ:
ಕುಟುಂಬಸ್ಥರು ಸೇರಿಕೊಂಡು ತಿರುಪತಿಗೆ ತೆರಳಿದ್ದರು. ತಿರುಪತಿಯ ತಿಮ್ಮಪ್ಪನ ದರ್ಶನ ಪಡೆದು ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ತಿರುಪತಿಯಿಂದ ಹೊರಟ ಟೊಯೋಟಾ ರಿಯಾನ್ ಕಾರು ಮಾರ್ಗ ಮಧ್ಯದ ಕೆಜಿಎಫ್ ತಾಲ್ಲೂಕಿನ ದೊಡ್ಡಕಾರಿ ಬಳಿ
ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ,ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಕಾಸ್, ನೀತು, ಆದ್ವಿಕ ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬಂಗಾರಪೇಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಬೇತಮಂಗಲ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮೂವರು ಮಹಿಳೆಯರು ಸಾವು:
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಬಳಿ ಇಂದು ಮುಂಜಾನೆ ಓಮ್ಮಿ ಕಾರು ಹಾಗೂ ಮಿನಿ ಗೂಡ್ಸ್ ಡಿಕ್ಕಿ ಸಂಭವಿಸಿ ಮೂವರು ಮಹಿಳಾ ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿ ಹಲವರು ಗಂಭೀರ ಗಾಯಗೊಂಡಿದ್ದಾರೆ.
ಮಲ್ಲಿಕಾರ್ಜುನಪುರ ಗ್ರಾಮದ ರೂಪಾ (೨೫), ರತ್ನಮ್ಮ (೪೫) ಹಾಗೂ ಮುನಿಚಿನ್ನಮ್ಮ (೪೮) ಮೃತಪಟ್ಟವರು. ?ವಾಹನದಲ್ಲಿದ್ದ ಸುಮಾರು ೧೨ ಮಂದಿಗೆ ಸಣ್ಣಪುಟ್ಟ ಹಾಗೂ ಗಂಭೀರ ಗಾಯಗಳಾಗಿದೆ. ಓಮ್ನಿ ಚಾಲಕನ ಕೈ ಮೂಳೆ ಮುರಿದಿದೆ.
ಕ್ಯಾಂಟರ್ ಪಲ್ಟಿ:
ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದಿಂದ ಶಿಡ್ಲಘಟ್ಟ ತಾಲೂಕಿನ ತಿಪ್ಪೇನಹಳ್ಳಿಗೆ ಕೂಲಿ ಕೆಲಸಕ್ಕಾಗಿ ಮಹಿಳೆಯರು ಮಾರುತಿ ಓಮ್ನಿ ವಾಹನದಲ್ಲಿ ತೆರಳುತ್ತಿದ್ದರು. ಮುಂಜಾನೆ ಸುಮಾರು ೨:೩೦ರ ಸುಮಾರಿಗೆ ಹೊಸಹಳ್ಳಿ ಗೇಟ್ ಸಮೀಪ ತಲುಪುತ್ತಿದ್ದಂತೆ, ಎದುರಿನಿಂದ ಬಂದ ಮಿನಿ ಕ್ಯಾಂಟರ್ ಹಾಗೂ ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಓಮ್ನಿ ನಜ್ಜುಗುಜ್ಜಾಗಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತದ ಶಬ್ದ ಕೇಳಿ ತಕ್ಷಣವೇ ಧಾವಿಸಿದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಕ್ಯಾಂಟರ್ ವಾಹನವೂ ಸಹ ಡಿಕ್ಕಿ ಬಳಿಕ ರಸ್ತೆಯಲ್ಲೇ ಪಲ್ಟಿಯಾಗಿತ್ತು.
ಸ್ಥಳಕ್ಕೆ ಶಿಡ್ಲಘಟ್ಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

































