Home ಜಿಲ್ಲೆ ಕಲಬುರಗಿ ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಮರುಪಾವತಿಸದೆ ಬ್ಯಾಂಕಿಗೆ 36.27 ಲಕ್ಷ ವಂಚನೆ

ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಮರುಪಾವತಿಸದೆ ಬ್ಯಾಂಕಿಗೆ 36.27 ಲಕ್ಷ ವಂಚನೆ

ಕಲಬುರಗಿ,ಸೆ.7-ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಮರುಪಾವತಿಸದೆ ಕೆಬಿಎಸ್ ಬ್ಯಾಂಕಿಗೆ 36,27,332 ರೂಪಾಯಿಗಳ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಕೃಷ್ಣ ಭೀಮ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ (ಕೆಬಿಎಸ್)ನ ಶಾಖಾ ವ್ಯವಸ್ಥಾಪಕ ಹರ್ಷ ಕುಲಕರ್ಣಿ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಆದಮ್ ಖಾನ್ ತಂದೆ ಲಿಯಾಖತ್ ಅಲಿ, ಬಂಡಿಗೆಪ್ಪ ತಂದೆ ಸಾಬಣ್ಣ, ಧೀರಾಜ್ ತಂದೆ ವಿಠ್ಠಲ, ಜಗನ್ನಾಥ ತಂದೆ ಇಸ್ಮಾಯಿಲಪ್ಪ, ಕೃಷ್ಣ ತಂದೆ ಶರಣಪ್ಪ ಹಾಗೂ ಮಹೇಶ್ ತಂದೆ ಭೀಮಶಾ ವಾಡೇಕರ್ ಎಂಬುವವರು ಅಕ್ಟೋಬರ್ 2022 ರಿಂದ 2023ರವರೆಗಿನ ವಿವಿಧ ದಿನಾಂಕಗಳಲ್ಲಿ ಬ್ಯಾಂಕಿನಲ್ಲಿ ನಕಲಿ ಚಿನ್ನಾಭರಣ ಅಡವಿಟ್ಟು ಲೋನ್ ಪಡೆದು ಸರಿಯಾದ ಸಮಯದಲ್ಲಿ ಮರು ಪಾವತಿಸದೆ ಬ್ಯಾಂಕಿಗೆ 36,27,332 ರೂ.ವಂಚನೆ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇವರು ಸಾಲ ಪಡೆಯುವ ಕಾಲಕ್ಕೆ ಬ್ಯಾಂಕಿನ ಅಪ್ರೈಸರ್ ಅಶ್ವಿನ್ ಕುಮಾರ ಅವರು ಬಂಗಾರದ ಆಭರಣ ನಕಲಿ ಇರುವುದು ಗೊತ್ತಿದ್ದರೂ ಸಹ ಅಸಲಿ ಬಂಗಾರದ ಆಭರಣವಿರುವುದಾಗಿ ಪ್ರಮಾಣ ಪತ್ರ ನೀಡಿರುವುದರಿಂದ ಲೋನ್ ಮಂಜೂರಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಅದಮ್ ಖಾನ್, ಬಂಡಿಗೆಪ್ಪ, ಧೀರಾಜ್, ಜಗನ್ನಾಥ, ಕೃಷ್ಣ ಮತ್ತು ಮಹೇಶ್ ವಾಡೇಕರ್ ಅವರು ಪಡೆದ ಸಾಲದ ಮೊತ್ತ ಬ್ಯಾಂಕಿನ್ ಬಡ್ಡಿ ಸೇರಿ 36.37 ಲಕ್ಷ ರೂ.ಬ್ಯಾಂಕಿಗೆ ಮರು ಪಾವತಿಸದೆ ಬ್ಯಾಂಕಿಗೆ ವಂಚನೆ ಮಾಡಿದ್ದು, ಅವರು ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ ?
ಹರ್ಷ ಕುಲಕರ್ಣಿ ಅವರು ಈ ಮೊದಲು ಆಳಂದನ ಕೆಬಿಎಸ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. 14.5.2026 ರಂದು ಆಳಂದದಿಂದ ಕಲಬುರಗಿಯ ಸೂಪರ್ ಮಾರ್ಕೆಟ್‍ನಲ್ಲಿರವ ಕೆಬಿಎಸ್ ಬ್ಯಾಂಕಿಗೆ ವರ್ಗಾವಣೆಯಾಗಿ ಬಂದ ಮೇಲೆ ಬ್ಯಾಂಕಿನ ಎಲ್ಲಾ ದಾಖಲಾತಿಗಳು, ಲೋನ್ ಮತ್ತು ಗೋಲ್ಡ್ ಲೋನ್ ಕಡತಗಳನ್ನು ಪರಿಶೀಲನೆ ನಡೆಸಿದಾಗ ಈ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.