
ಮಧ್ಯಪ್ರದೇಶದ ಸಾಗರ್ನಲ್ಲಿ ಬೆಚ್ಚಿಬೀಳಿಸುವ ಘಟನೆ, ಹಲವರು ಅಸ್ವಸ್ಥ
ಸಾಗರ್(ಮಧ್ಯಪ್ರದೇಶ), ಸೆ. ೬- ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕಳ್ಳಬಟ್ಟಿ ಮದ್ಯ ಸೇವಿಸಿ ಕನಿಷ್ಠ ೧೧ ಜನರು ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಜಿಲ್ಲಾ ಕೇಂದ್ರದಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ ಬಂಡಾ ತಾಲೂಕಿನ ನೌರಾಜ್ ಮತ್ತು ಗೂಗ್ರಾ ಖುರ್ದ್ ಎಂಬ ಎರಡು ಗ್ರಾಮಗಳಲ್ಲಿ ತಡರಾತ್ರಿ ಈ ದುರಂತ ಸಂಭವಿಸಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತಪಟ್ಟವರೆಲ್ಲರೂ ಬಂಡಾ ವ್ಯಾಪ್ತಿಯ ಬರಾಜ್ ಗ್ರಾಮದ ನಿವಾಸಿಗಳು ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಸಾಗರ್ ವಿಭಾಗದ ಕಮಿಷನರ್, ಐಜಿ, ಜಿಲ್ಲಾಧಿಕಾರಿ ಪ್ರತಿಭಾ ಪಾಲ್, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತನಿಖಾ ಪಡೆ ಸ್ಥಳಕ್ಕೆ ಧಾವಿಸಿದೆ. ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅಧಿಕಾರಿಗಳು, ಆಸ್ಪತ್ರೆಗೆ ದಾಖಲಾಗಿರುವ ಬಾಧಿತರಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ, ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ೬ ಮದ್ಯದ ಅಂಗಡಿಗಳನ್ನು ತಕ್ಷಣವೇ ಸೀಲ್ ಮಾಡಲಾಗಿದ್ದು, ಮದ್ಯದ ಮಾದರಿಗಳನ್ನು ಸಂಗ್ರಹಿಸಿ ತನಿಖೆಗೆ ರವಾನಿಸಲಾಗಿದೆ.
“ಕಳೆದ ೨೪ ರಿಂದ ೪೮ ಗಂಟೆಗಳಲ್ಲಿ ಮದ್ಯ ಸೇವಿಸಿ ವಾಂತಿ, ತಲೆನೋವು ಅಥವಾ ಜ್ವರದಂತಹ ಲಕ್ಷಣಗಳಿಂದ ಬಳಲುತ್ತಿರುವ ಯಾರೇ ಆದರೂ ತಕ್ಷಣವೇ ಸಿವಿಲ್ ಆಸ್ಪತ್ರೆಗೆ ಅಥವಾ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಮನವಿ ಮಾಡಿದ್ದಾರೆ.
ಪ್ರಸ್ತುತ ವೈದ್ಯರ ವಿಶೇಷ ತಂಡಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿವೆ. ಈ ದುರಂತದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಮೋಹನ್ ಯಾದವ್, ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದಾರೆ.
“ನಮ್ಮ ಸರ್ಕಾರ ಇಂತಹ ದುರಂತಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ರಾಜ್ಯದಲ್ಲಿ ಅಕ್ರಮ ಮದ್ಯದ ಜಾಲ ಸಕ್ರಿಯವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಜಿತು ಪಟವಾರಿ, ಈ ಘಟನೆ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.”ಸಾಗರ್ನಲ್ಲಿ ಇಂತಹ ದುರಂತ ನಡೆಯುತ್ತಿರುವುದು ಇದೇ ಮೊದಲೇನಲ್ಲ.
ಇಡೀ ಮಧ್ಯಪ್ರದೇಶದಲ್ಲಿ ಮದ್ಯದ ಮಾಫಿಯಾ ಆವರಿಸಿಕೊಂಡಿದ್ದು, ಪ್ರತಿಯೊಂದು ಮನೆಯಲ್ಲಿಯೂ ಹೆತ್ತವರು ಕಣ್ಣೀರಿಡುತ್ತಿದ್ದಾರೆ. ಸರ್ಕಾರ ಮಾತ್ರ ಮೌನ ವಹಿಸಿದೆ. ಈ ಪ್ರಕರಣದ ಕುರಿತು ತಕ್ಷಣವೇ ನ್ಯಾಯಾಂಗ ತನಿಖೆಯಾಗಬೇಕು ಮತ್ತು ೨೪ ಗಂಟೆಯೊಳಗೆ ಮದ್ಯದ ಮಾಫಿಯಾವನ್ನು ಜೈಲಿಗಟ್ಟಬೇಕು” ಎಂದು ಪಟವಾರಿ ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಮದ್ಯ ನಿಷೇಧಿತ ರಾಜ್ಯವಾದ ಗುಜರಾತ್ನ ಭಾವನಗರ ಜಿಲ್ಲೆಯಲ್ಲೂ ನಕಲಿ ಮದ್ಯ ಸೇವಿಸಿ ೧೩ ಜನರು ಸಾವನ್ನಪ್ಪಿದ್ದರು. ಇದೀಗ ಮಧ್ಯಪ್ರದೇಶದಲ್ಲೂ ಅಂತಹದೇ ದುರಂತ ಮರುಕಳಿಸಿದ್ದು, ಸಾವಿನ ನೈಜ ಕಾರಣ ಹಾಗೂ ಸೇವಿಸಿದ ಮದ್ಯದ ಸ್ವರೂಪದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
























