Home ಜಿಲ್ಲೆ ಕಲಬುರಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾದ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾದ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್

ಸೇಡಂ: ಶಿಕ್ಷಕರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊರಡಂಪಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಹಾಗೂ ಪೆನ್‍ಗಳನ್ನು ವಿತರಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ದೀನದಲಿತರ ಹಾಗೂ ಬಡವರ ಬಂಧು, ಅನ್ನದಾನ, ವಿದ್ಯಾದಾನ ಮತ್ತು ಕೃಷಿ ಅಭಿವೃದ್ಧಿಯ ಹರಿಕಾರರಾದ ಕರ್ನಾಟಕ ರಾಜ್ಯ ಭವಿಷ್ಯ ಬೆಳಕು ಚಾರಿಟಬಲ್ ಟ್ರಸ್ಟ್‍ನ ರಾಜ್ಯಾಧ್ಯಕ್ಷ ಗಿರೀಶ ನೇಲ್ಕುದ್ರಿ ಅವರ ಸಹಾಯಕರಾದ ಪೃಥ್ವಿರಾಜ ಸಲಗರ್ ಅವರ ಮುಖಾಂತರ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಹಾಗೂ ಪೆನ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‍ನ ಸದಸ್ಯರಾದ ಚಂದ್ರಕಾಂತ ಕಪನೂರ, ಸುಮೀತ ಸಲಗರ್, ಕವಿತಾ ಚಂದ್ರಕಾಂತ ಕಪನೂರ, ಶಾಲೆಯ ಮುಖ್ಯಗುರು ಶ್ರೀಶೈಲ ನಾಗಾವಿ, ಎಸ್‍ಡಿಎಂಸಿ ಅಧ್ಯಕ್ಷ ಶ್ರೀಮಂತ ಮೇತ್ರಿ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಕೊರಡಂಪಳ್ಳಿ, ಎಸ್‍ಡಿಎಂಸಿ ಸದಸ್ಯರಾದ ವಿನೋದ ವಿಮ್ಮಾ, ಶಿಕ್ಷಕರಾದ ಲಕ್ಷ್ಮೀಣಿಬಾಯಿ, ಸುನೀಲಕುಮಾರ, ಶಿವಕುಮಾರ, ರೇವಣಸಿದ್ದಪ್ಪ, ರಾಘವೇಂದ್ರ, ರಾಜು, ಭಾಗ್ಯಶ್ರೀ, ಡಿಜಿಟಲ್ ಸಖಿ ಗುಂಡಮ್ಮಾ ತಳವಾರ, ಹಣಮಂತರಾವ ತಿಪ್ಪಾ, ಮೋಹನ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಭಾರತದ ಶ್ರೇಷ್ಠ ತತ್ವಜ್ಞಾನಿ, ಶಿಕ್ಷಣ ತಜ್ಞ ಹಾಗೂ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆ. 5ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರ ಮಹತ್ವ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ಸ್ಮರಿಸಲಾಯಿತು.
ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು. ಮಕ್ಕಳ ತಪ್ಪುಗಳನ್ನು ತಿದ್ದಿ, ಅವರ ಪ್ರತಿಭೆಯನ್ನು ಗುರುತಿಸಿ, ಜೀವನದಲ್ಲಿ ಯಶಸ್ಸಿನತ್ತ ಸಾಗಲು ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಮಾತಾ-ಪಿತರ ನಂತರ ಮಕ್ಕಳ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಗಣ್ಯರು ಹೇಳಿದರು.
ಮಣ್ಣಿಗೆ ಮಡಿಕೆ ಮಾಡುವವರು ಸುಂದರ ರೂಪ ನೀಡುವಂತೆ, ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಉತ್ತಮ ರೂಪ ನೀಡುತ್ತಾರೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅಕ್ಷರ ಕಲಿಸಿ, ಜ್ಞಾನದ ದೀಪ ಬೆಳಗಿಸಿ, ಸನ್ಮಾರ್ಗ ತೋರಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.
ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ಮುನ್ನಡೆಸಿ, ಜ್ಞಾನದ ಬೆಳಕು ಹರಿಸುವ ಮೂಲಕ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಶಿಕ್ಷಕರು ದೇಶದ ನಿಜವಾದ ಶಿಲ್ಪಿಗಳು. ಅಜ್ಞಾನವನ್ನು ದೂರಮಾಡಿ, ಸುಸಂಸ್ಕøತ ಸಮಾಜ ನಿರ್ಮಿಸುವ ಮಹತ್ತರ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕರಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿ, ಅವರ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ವಿದ್ಯಾರ್ಥಿಗಳ ಮೇಲಿರಲಿ ಎಂದು ಶುಭಹಾರೈಸಲಾಯಿತು.