Home ಜಿಲ್ಲೆ ಕಲಬುರಗಿ ಕನ್ನಡ ಉಳಿಸಲು ಮಠ-ಮಾನ್ಯಗಳ ಕೊಡುಗೆ ಅಪಾರ : ಡಾ.ಶರಣಬಸಪ್ಪ ವಡ್ಡನಕೇರಿ

ಕನ್ನಡ ಉಳಿಸಲು ಮಠ-ಮಾನ್ಯಗಳ ಕೊಡುಗೆ ಅಪಾರ : ಡಾ.ಶರಣಬಸಪ್ಪ ವಡ್ಡನಕೇರಿ

ಕಲಬುರಗಿ,ಸೆ.7-ಹೈದರಾಬಾದ ನಿಜಾಮರ ಆಡಳಿತದ ಸಂದರ್ಭದಲ್ಲಿ ಉರ್ದು, ಮರಾಠಿ ಹಾಗೂ ತೆಲುಗು ಭಾಷೆಗಳ ಪ್ರಭಾವದಿಂದ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ನಲುಗುವ ಪರಿಸ್ಥಿತಿಯಲ್ಲಿದ್ದಾಗ ಭಾಲ್ಕಿ ಮಠ ಹಾಗೂ ಶರಣಬಸವೇಶ್ವರ ಸಂಸ್ಥಾನ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಸಾಹಿತಿ ಡಾ.ಶರಣಬಸಪ್ಪ ವಡ್ಡನಕೇರಿ ಹೇಳಿದರು.
ನಗರದ ಕಲಾಮಂಡಳದಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪಾಳಾದ ಸುಭಾಷ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ಸ್ವಾತಂತ್ರ್ಯ ಪೂರ್ವ ಹೈದರಾಬಾದ ಕರ್ನಾಟಕದಲ್ಲಿ ಕನ್ನಡ ಕಟ್ಟಿದವರು’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡದ ಮೊದಲ ಕೃತಿಗಳಲ್ಲಿ ‘ಕವಿರಾಜಮಾರ್ಗ’ ಕೃತಿಯು ಕವಿ ಶ್ರೀವಿಜಯ ಕನ್ನಡ ಸಾಹಿತ್ಯಕ್ಕೆ ರಾಜಮಾರ್ಗವನ್ನು ತೆರೆದಿಟ್ಟಿತು. ಕನ್ನಡ ನಾಡಿನ ಸೀಮೆ, ಜನರ ಸಾಹಿತ್ಯ ಮತ್ತು ಸಂಸ್ಕøತಿಯ ಮೇಲೆ ಬೆಳಕು ಚೆಲ್ಲಿತು. ವಚನ ಸಾಹಿತ್ಯದ ಬೀಜ ಇಲ್ಲಿಯೇ ಮೊಳೆಕೆ ಒಡೆದು , ದಾಸ ಸಾಹಿತ್ಯದ ತೊಟ್ಟಿಲು ಕೂಡ ಈ ಭಾಗದಲ್ಲಿಯೇ ತೂಗಿತು. ಇಂತಹ ಶ್ರೀಮಂತ ಕನ್ನಡ ನುಡಿ ಸೊರಗುವುದನ್ನು ಇಲ್ಲಿನ ಕನ್ನಡ ಪ್ರೇಮಿಗಳು, ಮಠ-ಮಾನ್ಯಗಳು ಸುಮ್ಮನೆ ನೋಡುತ್ತಿರಲಿಲ್ಲ . ಹೊರಗಡೆ ಉರ್ದು ಫಲಕಗಳನ್ನು ಹಾಕಿ ಒಳಗಡೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿದರು ಎಂದು ಡಾ. ಶರಣಬಸಪ್ಪ ವಡ್ಡನಕೇರಿ ಹೇಳಿದರು.
ಕರ್ನಾಟಕ ಏಕೀಕರಣದ ಹೋರಾಟಕ್ಕೆ ದೊಡ್ಡಪ್ಪ ಅಪ್ಪ ಅವರು ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ಡಾ. ಕೆ. ಗಿರಿಮಲ್ಲ ಹೇಳಿದರು.
ದೊಡ್ಡಪ್ಪ ಅಪ್ಪ ಅವರ ಅವಧಿಯಲ್ಲಿ ಕಲಬುರಗಿ ನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅವರ ಆಶ್ರಯ ಹಾಗೂ ಆಸರೆಯಲ್ಲಿ ಯಶಸ್ವಿಯಾಗಿ ನಡೆಯಿತು
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನವು ಕನ್ಯಾ ಶಾಲೆ ಆರಂಭಿಸುವ ಮೂಲಕ ಅಕ್ಷರ ಜ್ಯೋತಿ ಬೆಳಗಿಸಿತು. ಪಂಡಿತ ತಾರಾನಾಥರು ರಾಯಚೂರು ಭಾಗದಲ್ಲಿ ಕನ್ನಡದ ಕೆಲಸ ಮಾಡಿದರು. ಸ್ವಾಮಿ ರಮಾನಂದ ತೀರ್ಥರು, ಅನ್ನದಾನಯ್ಯ ಪುರಾಣಿಕ, ಕೊಪ್ಪಳ ಕೃಷ್ಣರಾವ್, ಸುರಪುರದ ಬುದ್ಧಿವಂತ ಶೆಟ್ಟರು, ಭಾಲ್ಕಿಯ ಮಠ, ಪರುಷ ಮಠ ಸೇರಿದಂತೆ ಅನೇಕರು ಕನ್ನಡ ಉಳಿವಿಗಾಗಿ ಶ್ರಮಿಸಿದ್ದಾರೆ. ಇಂತಹ ಮಹನೀಯರ ಪರಿಶ್ರಮದ ಫಲವಾಗಿ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಉಳಿದುಕೊಂಡಿದೆ. ಅದನ್ನು ಇನ್ನಷ್ಟು ಶ್ರೀಮಂತಗೊಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಿದ್ದಣಗೌಡ ಕೆ. ಪಾಟೀಲ ಕಡಣಿ ಉದ್ಘಾಟಿಸಿದರು. ಉಮೇಶ ಸಿದ್ದಣಗೋಳ ಕಡಣಿ, ಮಲ್ಲಿನಾಥ ಕೊಳ್ಳೂರ, ಅಂಬಾರಾಯ ಕೋಣೆ ಹಾಗೂ ರಮಾದೇವಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಶ್ವನಾಥ ಭಕರೆ ಹಾಗೂ ಸಿದ್ದರಾಮ ರಾಜಮಾನೆ ಪ್ರತಿಕ್ರಿಯೆ ನೀಡಿದರು.
ಪೆÇ್ರ. ಯಶವಂತರಾಯ ಅಷ್ಠಗಿ, ಶಿವಯೋಗಿ ಭಜಂತ್ರಿ, ನಾಗರಾಜ ಗಂದಿಗುಡಿ, ಚಾಮರಾಜ ದೊಡ್ಡಮನಿ, ಸೈಯದ್ ಅಕ್ಬರ್ ಹುಸೇನಿ, ಜಗನ್ನಾಥ ಪಾಟೀಲ ಧರ್ಮಾಪುರ ಸೇರಿದಂತೆ ಹಲವರು ಗೌರವ ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಂಡೂರಾವ್ ಕಡಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಯಬಣ್ಣ ಹೂಗಾರ ನೀಲೂರ ನಿರೂಪಿಸಿದರು. ರೇವಣಸಿದ್ದಪ್ಪ ಪಾಟೀಲ ವಂದಿಸಿದರು.