Home Lead News ಪ್ರಜಾಸೇವೆ ಆರಂಭ

ಪ್ರಜಾಸೇವೆ ಆರಂಭ

ಬೆಂಗಳೂರು, ಸೆ. ೫- ಜನರ ಅಹವಾಲುಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸುವ ಪ್ರಜಾಸೇವೆ ಇಲಾಖೆ ಇಂದಿನಿಂದ ಕಾರ್ಯಾರಂಭ ಮಾಡಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗೂಡೆಕೋಟೆ ರಸ್ತೆಯಲ್ಲಿರುವ ಶಾಸಕರ ಕಚೇರಿಯ ಮೈದಾನದಲ್ಲಿಂದು ನಡೆದ ಸಮಾರಂಭದಲ್ಲಿ ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಿದರು.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯಮಟ್ಟದ ಪ್ರಜಾಸೇವೆ ಇಲಾಖೆಗೆ ಚಾಲನೆ ನೀಡಿದ ಜತೆ ಜತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈ ಪ್ರಜಾಸೇವೆ ಆಂದೋಲನ ಆರಂಭವಾದವು.


ಬೆಳಗಾವಿ, ಬೀದರ್, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಪ್ರಜಾಸೇವೆ ಅಭಿಯಾನ ಸಭೆಗಳು ನಡೆದವು.
ಈ ನಾಲ್ಕು ಜಿಲ್ಲೆಗಳ ಪ್ರಜಾಸೇವೆ ಅಭಿಯಾನ ಕಾರಣಾಂತರಗಳಿಂದ ಮುಂದೂಡಲಾಗಿದೆ.


ರಾಜ್ಯದಲ್ಲಿ ಪ್ರಜಾಸೇವೆ ಇಲಾಖೆ ಆರಂಭವಾಗುವ ಮೂಲಕ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಸಭೆಗಳು ನಡೆಯಲಿದ್ದು, ಜನರಿಂದ ಅಹವಾಲು ಸ್ವೀಕರಿಸಿ ಅರ್ಹ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಗುವುದು.


ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜನರ ಅಹವಾಲು ಆಲಿಸಲು ಪ್ರಜಾಸೇವೆ ಇಲಾಖೆಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದರು.


ಅಹವಾಲು ನಿಮ್ಮದು, ಪರಿಹಾರ ನಮ್ಮದು ಎಂಬ ಆಶಯದೊಂದಿಗೆ ಜನರಿಂದ ಅರ್ಜಿಗಳನ್ನು ಸ್ವೀಕರಿಸಿ, ಆ ಅರ್ಜಿಗಳಿಗೆ ೨೧ ದಿನಗಳಲ್ಲಿ ಪರಿಹಾರ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.


ಅಹವಾಲು ಸ್ವೀಕಾರ


ಆರಂಭದಲ್ಲಿ ಮುಖ್ಯಮಂತ್ರಿಗಳು ವಿವಿಧ ಕೌಂಟರ್ ಗಳಿಗೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.


ಪ್ರಜಾಸೇವಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ, ಉಪ ಸಭಾಪತಿ ಮಂಕಾಳ್ ವೈದ್ಯ, ಸಂಸದರಾದ ಈ.ತುಕಾರಾಂ, ಪ್ರಭಾ ಮಲ್ಲಿಕಾರ್ಜುನ, ಡಾ.ಜಿ.ಸಿ.ಚಂದ್ರಶೇಖರ್, ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ, ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಹಡಗಲಿ ಶಾಸಕ ಕೃಷ್ಣನಾಯಕ್,
ಹಗರಿಬೊಮ್ಮನಹಳ್ಳಿ ಜೆಡಿಎಸ್ ಶಾಸಕ ಕೆ.ನೇಮಿರಾಜ ನಾಯ್ಕ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜನನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ್ ನಾಯ್ಕ್, ಜಿಲ್ಲಾಧ್ಯಕ್ಷ ಕೆ.ಶಿವಮೂರ್ತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಡಿಸಿ ಕವಿತಾ ಎಸ್. ಮನ್ನಿಕೇರಿ, ಮಾಜಿ ಶಾಸಕ ಎನ್.ಎಂ.ನಬಿ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.


ಪ್ರತ್ಯೇಕ ಕೌಂಟರ್: ಸಾರ್ವಜನಿಕರು ಹಾಗೂ ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಲು ವೇದಿಕೆ ಬಳಿ ಪ್ರತ್ಯೇಕ ಕೌಂಟರ್ ತೆರೆಯಲಾಗಿತ್ತು.


ಪ್ರದರ್ಶನ ಮಳಿಗೆ: ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ ಯೋಜನೆ, ಯುವನಿಧಿ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿ ನೀಡಲು ೩೦ ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು.
ಸಮಾರಂಭಕ್ಕೆ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಜನಸಾಗರವೇ ಹರಿದು ಬಂದಿತ್ತು.

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು: ಡಿಕೆಶಿ

ಸಮಸ್ಯೆ ನಿಮ್ಮದು..ಪರಿಹಾರ ನಮ್ಮದು ಎಂಬ ಘೋಷವಾಕ್ಯದಡಿ ಪ್ರಜಾಸೇವಾ ಅಭಿಯಾನ ಆರಂಭಿಸಲಾಗಿದ್ದು., ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.ಎಲ್ಲ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸದಿದ್ದರೂ, ನೇರವಾಗಿ ಜನರ ಭಾವನೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಲು ಇದರಿಂದ ಉತ್ತಮ ಅವಕಾಶ ದೊರೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


ಕೂಡ್ಲಿಗಿ ಹೋಬಳಿಯಿಂದ ಪ್ರಜಾಸೇವಾ ಅಭಿಯಾನ ಸರ್ಕಾರ ನಿಮ್ಮ ಮನೆಬಾಗಿಲಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರದ ವಿವಿಧ ಇಲಾಖೆಗಳ ಸೇವೆ ಪಡೆಯುವಾಗ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ನೀಡುವ ಉದ್ದೇಶದಿಂದ ಪ್ರಜಾಸೇವೆ ವ್ಯವಸ್ಥೆ ರೂಪಿಸಲಾಗಿದೆ. ಇದರ ಭಾಗವಾಗಿ ಪ್ರಜಾಸೇವಾ ಅಭಿಯಾನವನ್ನೂ ಜಾರಿಗೊಳಿಸಲಾಗುತ್ತಿದ್ದು,ಜನರು ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಪದೇಪದೆ ಅಲೆದಾಡುವುದನ್ನು ತಪ್ಪಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.


ಸರ್ಕಾರಿ ಸೇವೆ, ಸೌಲಭ್ಯ ಪಡೆಯುವಲ್ಲಿನ ಅಡಚಣೆ, ಸಮಸ್ಯೆ, ಸವಾಲುಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸರಳ ವಿಧಾನದಡಿ ಹೇಳಿಕೊಳ್ಳಬಹುದಾದ ವ್ಯವಸ್ಥೆಯನ್ನು ಪ್ರಜಾಸೇವಾ ಇಲಾಖೆ ಮೂಲಕ ಕಲ್ಪಿಸಲಾಗಿದೆ. ಸಣ್ಣ ಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಕಚೇರಿಗಳಿಗೆ ಅಲೆದಾಟ ತಪ್ಪಿಸಲು, ನಾನಾ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಸ್ವಿಕರಿಸಿ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಹೆಚ್ಚಿಸುವ ದೃಷ್ಟಿಯಿಂದ ವಿನೂತನ ಅಹವಾಲು ಸ್ವಿಕಾರ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.


ಪ್ರತಿ ಶನಿವಾರ ತಾಲೂಕು,ಹೋಬಳಿ ಮಟ್ಟದ ಪ್ರಜಾಸೇವಾ ಅಭಿಯಾನ ಸಭೆ ನಡೆಯಲಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಸಭೆ ನಡೆಯುತ್ತದೆ.ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಹೋಬಳಿ ಮಟ್ಟದಲ್ಲಿ ಸಭೆ ಆಯೋಜನೆಯಾಗಲಿದೆ ಎಂದು ತಿಳಿಸಿದರು.