
ಕಲಬುರಗಿ,ಸೆ.8: ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಇಡೀ ಜೀವನವೇ ಒಂದು ಶ್ರೇಷ್ಠ ವ್ಯಕ್ತಿತ್ವ ವಿಕಸನದ ಪಠ್ಯಪುಸ್ತಕದಂತಿದೆ ಎಂದು ದೊಡ್ಡಪ್ಪ ಅಪ್ಪ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆನಂದ ಸಿದ್ಧಾಮಣಿ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರು ಮತ್ತು ವ್ಯಕ್ತಿತ್ವ ವಿಕಸನ ವಿಷಯ ಕುರಿತು ಮಾತನಾಡಿ, ಪೂಜ್ಯ ಡಾ.ಅಪ್ಪ ಅವರ ವ್ಯಕ್ತಿತ್ವ ಶಿಕ್ಷಣ, ಅಧ್ಯಾತ್ಮ, ದಾಸೋಹ, ಉದ್ಯೋಗದಲ್ಲಿ ನೋಡಬಹುದಾಗಿದೆ.
ಅವರ ದಾಸೋಹ ಸೂತ್ರಗಳಲ್ಲಿ ಕಾಯಕ, ದಾಸೋಹ, ಸಾಮಾಜಿಕ ಕಳಕಳಿ ಕಂಡು ಬರುತ್ತದೆ.
ಪೂಜ್ಯರಿಗೆ ‘ವಿದ್ಯಾ ಭಂಡಾರಿ’, ‘ಮಹಾ ದಾಸೋಹಿ’ ಎಂಬ ಬಿರುದುಗಳು ಕೇವಲ ಪ್ರಶಸ್ತಿಗಳಲ್ಲ, ಬದಲಿಗೆ ಅವರ ಪರಿಪೂರ್ಣ ವ್ಯಕ್ತಿತ್ವದ ಪ್ರತೀಕಗಳಾಗಿವೆ. ಇಂದಿನ ಯುವಪೀಳಿಗೆ ಅವರ ಸರಳತೆ, ಜ್ಞಾನದ ಹಸಿವು, ಸಾಮಾಜಿಕ ಕಳಕಳಿ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಡಾ. ಅಪ್ಪಾಜಿ ಅವರು ತಮ್ಮ ಇಡೀ ಜೀವನವನ್ನು ಜ್ಞಾನ ಮತ್ತು ಸಾಮಾಜಿಕ ಸೇವೆಗಾಗಿ ಮುಡುಪಾಗಿಟ್ಟಿದ್ದರು.
ಡಾ. ಅಪ್ಪಾಜಿ ಅವರು ಕೇವಲ ‘ಅನ್ನ ದಾಸೋಹ’ ಮಾತ್ರವಲ್ಲದೆ, ‘ಜ್ಞಾನ ದಾಸೋಹ’ ನೀಡಿದ ಮಹಾಪುರುಷ. ವ್ಯಕ್ತಿತ್ವ ವಿಕಸನದಲ್ಲಿ ಕೇವಲ ಸ್ವಂತ ಪ್ರಗತಿಯಷ್ಟೇ ಮುಖ್ಯವಲ್ಲ, ಸಮಾಜಕ್ಕೆ ಮರಳಿ ಕೊಡುವ ಗುಣ ಅತ್ಯಂತ ಪ್ರಮುಖವಾದುದು. ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸೇವಾ ಮನೋಭಾವವೇ ಮೂಲಾಧಾರ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಭಾಗದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಕಾಲೇಜುಗಳನ್ನು ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದರು. ಲಿಂಗ ತಾರತಮ್ಯದ ವಿರುದ್ಧ ದನಿ ಎತ್ತಿದರು. ಡಾ. ಅಪ್ಪಾಜಿ ಅವರು ಜಾತಿ, ಧರ್ಮಗಳ ಬೇಲಿಗಳನ್ನು ಮೀರಿ ಎಲ್ಲ ವರ್ಗದ ಜನರನ್ನು ಪ್ರೀತಿಸಿದವರು. ಅವರ ಸಂಸ್ಥಾನದಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿತ್ತು. ಸಮಾಜದಲ್ಲಿ ಭಾವೈಕ್ಯತೆ ಬಿತ್ತಿದ ಮಹಾನ್ ಸಂತ ಅವರು.
ಪರಂಪರಾಗತ ಶರಣ ಸಂಸ್ಕøತಿಯ ಮೌಲ್ಯಗಳನ್ನು ಕಾಪಾಡಿಕೊಳ್ಳುತ್ತಲೇ ತಂತ್ರಜ್ಞಾನ, ಎಂಜಿನಿಯರಿಂಗ್, ಮ್ಯಾನೇಜ್‍ಮೆಂಟ್‍ನಂತಹ ಆಧುನಿಕ ಶಿಕ್ಷಣವನ್ನು ತಳಮಟ್ಟದ ಜನರಿಗೆ ತಲುಪಿಸುವ ದೃಢ ಸಂಕಲ್ಪ ಹೊಂದಿರುವ ವ್ಯಕ್ತಿಯಾಗಿದ್ದರು.ಸಕಲ ಜೀವಾತ್ಮರಿಗೆ ಶರಣೆಂಬುವುದು ಅವರ ಆದರ್ಶ ವ್ಯಕ್ತಿತ್ವವಾಗಿತ್ತು ಎಂದು ಹೇಳಿದರು.































