Home ಜಿಲ್ಲೆ ತುಮಕೂರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅರಸು ಕೊಡುಗೆ ಅಪಾರ

ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅರಸು ಕೊಡುಗೆ ಅಪಾರ

ಕುಣಿಗಲ್, ಆ. ೨೨- ರಾಜ್ಯದಲ್ಲಿ ಶೋಷಿತ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ಹಲವಾರು ಕ್ರಾಂತಿಕಾರ ಸುಧಾರಣೆಗಳನ್ನು ಸಮಾಜಕ್ಕೆ ಕೊಡುಗೆ ನೀಡಿದಂತಹ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಸಂತಕುಮಾರ್ ತಿಳಿಸಿದರು.


ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರವರ ೧೧೧ನೇ ಜನ್ಮ ಜಯಂತಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.


ದೇಶದ ಇತಿಹಾಸದಲ್ಲಿ ಆಳ್ವಿಕೆ ನಡೆಸಿದ ಮುಖ್ಯಮಂತ್ರಿಗಳಲ್ಲಿ ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗದವರು ಕಲ್ಯಾಣಕ್ಕಾಗಿ ಅನೇಕ ಸುಧಾರಣೆಗಳನ್ನು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ರಾಜ್ಯದಲ್ಲಿ ತಮ್ಮ ಅಧಿಕಾರದ ಆಡಳಿತ ಅವಧಿಯಲ್ಲಿ ಶೋಷಿತ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದರು ಎಂದರು.


ಮನುಷ್ಯ ಹುಟ್ಟು ಸಾವು ಈ ಮಧ್ಯೆ ಸಮಾಜಕ್ಕೆ ತನ್ನದೇ ಆದಂತಹ ಕೊಡುಗೆ ನೀಡಿದಾಗ ಸಮಾಜ ಅವರ ಬಗ್ಗೆ ಒಂದು ದಿನ ಅವರ ಸವಿನೆನಪುಗಳನ್ನು ನೆನೆದು ಗೌರವ ಸೂಚಿಸುತ್ತದೆ. ಹಿಂದುಳಿದ ವಿದ್ಯಾರ್ಥಿಗಳು ತಮಗೆ ನೀಡಿರುವ ಉತ್ತಮ ವಸತಿ ವ್ಯವಸ್ಥೆಯ ಸದುಪಯೋಗಪಡಿಸಿಕೊಂಡು ಶಿಕ್ಷಣವನ್ನು ಪಡೆಯುವ ಮೂಲಕ ಗುರಿ ಸಾಧಿಸಬೇಕು ಎಂದ ಅವರು, ಶಿಕ್ಷಣ ಗುರಿ ಶಿಸ್ತು ತಮ್ಮ ಜೀವನವನ್ನೇ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು


ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಜೆ. ವೇದಮೂರ್ತಿ ಮಾತನಾಡಿ, ದೇವರಾಜ್ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಹಿಂದುಳಿದ ಶೋಷಿತ ಸಮಾಜಕ್ಕೆ ಅನೇಕ ಸುಧಾರಣೆಗಳನ್ನು ಜಾರಿಗೆ ತಂದಂತಹ ಮಹಾ ಪುರುಷರಾಗಿದ್ದು, ಅವರು ಆಡಳಿತ ಅವಧಿಯಲ್ಲಿ ಹಲವಾರು ಸುಧಾರಣೆಗಳಾದ ಮಲ ಹೊರುವ ಪದ್ಧತಿ, ಜೀತ ಪದ್ಧತಿ, ಉಳುವವನೇ ಭೂಮಿಯ ಒಡೆಯ ನಿವೇಶನಗಳು ಎಲ್.ಜಿ. ಹಾವನೂರ್ ಆಯೋಗ ರಚನೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸ್ಥಾಪನೆ, ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಎನ್ನುವಂತಹ ಹಲವಾರು ಸುಧಾರಣೆಗಳನ್ನು ಜಾರಿಗೆ ತಂದು ಇಡೀ ರಾಜ್ಯದಲ್ಲಿ ಶೋಷಿತ ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕಗಾಗಿ ಹಲವಾರು ವಸತಿ ನಿಲಯಗಳನ್ನು ಸ್ಥಾಪನೆ ಮಾಡಿ ಶಿಕ್ಷಣಕ್ಕೆ ದಾರಿ ದೀಪವಾದರೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಗುರಿ ಛಲದಿಂದ ಸಾಧನೆಗಾಗಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಿದರೆ ಮತ್ತೊಂದು ದಿನ ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತದೆ ಎಂದರು.


ನಿರುದ್ಯೋಗಿ ಪದವೀಧರರಿಗೆ ನೇಮಕ ಮಾಡಿ ಭತ್ಯೆ, ಅವರಿಗೆ ಉದ್ಯೋಗ ದೊರಕಿಸುವಂತೆ ಮಾಡಿದಂತಹ ಮಹಾ ಪರಿವರ್ತನೆಯ ಹರಿಕಾರರಾಗಿದ್ದರು ಎಂದು ತಿಳಿಸಿದರು
ಪುರಸಭಾ ಮುಖ್ಯಾಧಿಕಾರಿ ರವಿಕುಮಾರ್ ಮಾತನಾಡಿ, ಭಾರತ ಜೋಡೋ ಸಂಘಗಳನ್ನು ಸ್ಥಾಪಿಸುವ ಮೂಲಕ ಯುವಕರು ಕಲೆ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿದ್ದು, ೧೬ ರಿಂದ ೩೫ ವರ್ಷದ ಯುವಕರು ಯುವತಿಯರು ಈ ಸಂಸ್ಥೆಯಲ್ಲಿ ನೋಂದಾಯಿಸಬೇಕು ಎಂದರು.


ಆರೋಗ್ಯಾಧಿಕಾರಿ ಡಾ. ಮರಿಯಪ್ಪ, ಮಹಿಳಾ ಕಲ್ಯಾಣಾಧಿಕಾರಿ ಕಮಲ, ಸಮಾಜ ಕಲ್ಯಾಣಾಧಿಕಾರಿ ಶಿವಲಿಂಗಯ್ಯ, ದಲಿತ ಮುಖಂಡ ವರದರಾಜು, ಸವಿತಾ ಸಮಾಜದ ನಾರಾಯಣಸ್ವಾಮಿ, ಕುಮಾರ್ ವಿಶ್ವಕರ್ಮ, ಬಿಸಿಎಂ ಇಲಾಖೆಯ ಶ್ರೀನಿವಾಸ್, ಮಾಯಣ್ಣ ಮತ್ತಿತರರು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.