
ತುಮಕೂರು, ಸೆ. ೧೩- ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬ್ಯಾಂಕ್ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಎಸ್‌ಬಿಐ ಬ್ಯಾಂಕ್ ಮುಂಭಾಗ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಎಸ್‌ಬಿಐ ಬ್ಯಾಂಕ್ ಮುಂಭಾಗ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.
ವಾರಕ್ಕೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ೨೦೧೫ ರಿಂದ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ೨೦೨೪ರ ಒಪ್ಪಂದದಲ್ಲಿ ಉಳಿದ ಶನಿವಾರಗಳನ್ನು ರಜಾ ದಿನಗಳನ್ನಾಗಿ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿತ್ತು ಎಂದು ಪ್ರತಿಭಟನಾನಿರತ ಬ್ಯಾಂಕ್ ನೌಕರರು ಹೇಳಿದರು.
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ೪೦ ನಿಮಿಷಗಳ ಹೆಚ್ಚುವರಿ ಕೆಲಸದ ಅವಧಿಗೆ ಸಂಘಟನೆಗಳು ಸಮ್ಮತಿಸಿದ್ದವು. ಈ ಬೇಡಿಕೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ೮ ಮತ್ತು ೯ ರಂದು ಮುಖ್ಯ ಕಾರ್ಮಿಕ ಆಯುಕ್ತರು ಹಾಗೂ ಉಪ ಮುಖ್ಯ ಕಾರ್ಮಿಕ ಆಯುಕ್ತರ ನೇತೃತ್ವದಲ್ಲಿ ಸಂಧಾನ ಸಭೆ ನಡೆದಿತ್ತು. ಹಣಕಾಸು ಸಚಿವಾಲಯದ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ಭರವಸೆ ದೊರೆಯದ ಹಿನ್ನೆಲೆಯಲ್ಲಿ ಯಾವುದೇ ಒಪ್ಪಂದ ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಪ್ಪಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಸೆಪ್ಟೆಂಬರ್ ೨೮, ೨೯ ಮತ್ತು ೩೦ ರಂದು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬೇಡಿಕೆಗಳು ಈಡೇರದಿದ್ದರೆ ಅಕ್ಟೋಬರ್ ೨೬ ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಮುಷ್ಕರದ ಸಂದರ್ಭದಲ್ಲಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗ್ರಾಹಕರು ಮುಂಚಿತವಾಗಿ ಅಗತ್ಯ ವ್ಯವಹಾರಗಳನ್ನು ಪೂರ್ಣಗೊಳಿಸುವಂತೆಯೂ ಸಹ ಪ್ರತಿಭಟನಾನಿರತ ಬ್ಯಾಂಕಿಂಗ್ ನೌಕರರು ಮನವಿ ಮಾಡಿದರು.
































