
ಚಿಕ್ಕನಾಯಕನಹಳ್ಳಿ, ಸೆ. ೧೩- ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇಖರಿಸಲಾಗಿದ್ದ ಪಾರಂಪರಿಕ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸುವ ಮೂಲಕ ಕಸದ ಸಮಸ್ಯೆಯನ್ನು ತಪ್ಪಿಸಿ, ಇದರಿಂದ ಗೊಬ್ಬರವನ್ನು ತಯಾರಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವಂತೆ ಶಾಸಕ ಸಿ.ಬಿ.ಸುರೇಶ್‌ಬಾಬು ಸೂಚಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಘಟಕದಲ್ಲಿರುವ ಸುಮಾರು ೨೫ ವರ್ಷಗಳಿಂದ ಪಾರಂಪರಿಕ ಕಸವನ್ನು ಈ ಯಂತ್ರಗಳ ಮೂಲಕ ಸರಿಯಾದ ರೀತಿಯಲ್ಲಿ ೫೦ ದಿನಗಳಲ್ಲಿ ವಿಲೇವಾರಿ ಮಾಡಿ ಇದರಲ್ಲಿ ಹಸಿ ಕಸ ಹಾಗೂ ಒಣ ಕಸಗಳನ್ನು ಬೇರ್ಪಡಿಸಿ ಸರಿಯಾದ ರೀತಿಯಲ್ಲಿ ಗೊಬ್ಬರನವ್ನು ತಯಾರಿಸಿ ಅದನ್ನು ರೈತರಿಗೆ ಮಾರಾಟ ಮಾಡಿ ಸಾಧ್ಯವಾದಷ್ಟೂ ಭೂಮಿಗೆ ಯಾವುದೇ ರೀತಿಯ ತ್ಯಾಜ್ಯ ಸೇರದಂತೆ ಎಚ್ಚರಿಕೆ ವಹಿಸಿ ಎಂದರು.
ಕಸವಿಲೇವಾರಿಯು ಪ್ರತಿ ಮನೆಗಳಿಂದಲೇ ಮಾಡಿದಾಗ ಮಾತ್ರ ಈ ಕಸದ ಸಮಸ್ಯೆ ತಪ್ಪುತ್ತದೆ ಎಂದ ಅವರು, ಗಾಜು, ಪ್ಲಾಸ್ಟಿಕ್‌ನಂತಹ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಬೇರ್ಪಡಿಸಿ ಹಸಿ ಕಸದಿಂದ ತಯಾರಿಸಬಹುದಾದಂತಹ ಸಾವಯವ ಗೊಬ್ಬರ ಬೆಳೆಗಳಿಗೆ ಅನುಕೂಲವಾಗಲಿದೆ ಎಂದರು.
ಇಂಜಿನಿಯರ್ ಮಂಜುನಾಥ್ ಮಾತನಾಡಿ, ಪಟ್ಟಣದಲ್ಲಿ ಪ್ರತಿದಿನ ಸುಮಾರು ೧೦ ಟನ್ ಕಸ ಶೇಖರಣೆಯಾಗುತ್ತಿದ್ದು ಅಂದಿನ ಕಸವನ್ನು ಅಂದೇ ಸರಿಯಾದ ರೀತಿಯಲ್ಲಿ ವಿಂಗಡಣೆ ಮಾಡಲಾಗುತ್ತಿದ್ದು ಇಷ್ಟು ದಿನ ಶೇಖರಣೆಯಾಗಿದ್ದ ಕಸವನ್ನು ಈ ಯಂತ್ರದ ಮೂಲಕ ಅದಷ್ಟು ವಿಲೇ ಮಾಡಲಾಗುವುದು. ಸುಮಾರು ೨೫-೨೬ವರ್ಷಗಳಿಂದ ಶೇಖರಿಸಲಾಗಿದ್ದ ೨೫ ಸಾವಿರ ಟನ್ ಘನತ್ಯಾಜ್ಯ ವಿಲೇವಾರಿಗೆ ಒಂದು ಕೋಟಿ ೭೯ ಲಕ್ಷಕ್ಕೆ ಟೆಂಡರ್ ಆಗಿದ್ದು ಇದನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗುವುದು ಎಮದರು.
ಈ ಸಂದರ್ಭದಲ್ಲಿ ಇಂಜಿನಿಯರ್ ವಿನಯ್, ಗುತ್ತಿಗೆದಾರ ಗುಂಟೂರು ಜಾನಿ, ಕೋ.ಬ್ಯಾಂಕ್ ನಿದೇಶಕಿ ಶಿಲ್ಪ ಧರಣಿಶ್, ಯುವ ಮುಖಂಡ ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು.
































