Home ಜಿಲ್ಲೆ ತುಮಕೂರು ಆತ್ಮವಿಶ್ವಾಸಕ್ಕೆ ವಿವೇಕಾನಂದರೇ ಮಾದರಿ: ಪ್ರದೀಪ್

ಆತ್ಮವಿಶ್ವಾಸಕ್ಕೆ ವಿವೇಕಾನಂದರೇ ಮಾದರಿ: ಪ್ರದೀಪ್

Oplus_16909314

ತುಮಕೂರು, ಸೆ. ೧೩- ಸ್ವಾಮಿ ವಿವೇಕಾನಂದರ ಜೀವನವೇ ಒಂದು ದೊಡ್ಡ ಸಂದೇಶ. ಯುವ ಶಕ್ತಿಯ ಮೇಲೆ ಅವರಿಟ್ಟ ನಂಬಿಕೆ ಅಗಾಧವಾದುದು. ವಿವೇಕಾನಂದರ ಚಿಂತನೆಗಳನ್ನು ವಿದ್ಯಾರ್ಥಿಗಳು ಓದಲೇಬೇಕು ಎಂದು ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಹೇಳಿದರು.


ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದ ಪ್ರಾಮುಖ್ಯತೆಯ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸ್ವಾಮಿ ವಿವೇಕಾನಂದರು ಇಡೀ ಪ್ರಪಂಚವನ್ನು ಪರ್ಯಟನೆ ಮಾಡಿದ ವರು. ಪ್ರಯಾಣದ ಮೂಲಕವಾಗಿ ಬದುಕನ್ನು ಅರ್ಥ ಮಾಡಿಕೊಳ್ಳುವುದು ಯುವಕರಿಗೆ ಅಗತ್ಯ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಸದಾ ಜಾಗೃತವಾಗಿರಬೇಕು. ವಿದ್ಯಾರ್ಜನೆಗೆ ಬೇಕಾಗಿರುವುದು ಧೈರ್ಯ ಮತ್ತು ವಿನಯವಂತಿಕೆಯೇ ಹೊರತು ಭಯವಲ್ಲ ಎಂದು ಹೇಳಿದರು.


ಸ್ವಾಮಿ ವಿವೇಕಾನಂದರ ಚಿಂತನೆಗಳ ಕುರಿತು ಉಪನ್ಯಾಸ ನೀಡಿದ ತುಮಕೂರು ರಾಮಕೃಷ್ಣ-ವಿವೇಕಾನಂದಾಶ್ರಮದ ಶ್ರೀ ಧೀರಾನಂದಜೀ, ಜೀವನದ ಧ್ಯೇಯ ಸುಖವಲ್ಲ, ಜ್ಞಾನ ಸಂಪಾದನೆ. ತನ್ನಿಂದ ಕೈಲಾಗುವುದಿಲ್ಲ ಎಂದು ಅಂದುಕೊಳ್ಳುವುದೇ ಮಹಾಪಾಪ. ವಿದ್ಯಾರ್ಥಿಗಳಲ್ಲಿ ಇಚ್ಛಾ ಶಕ್ತಿಯಿದ್ದರೆ ಮಹತ್ ಸಾಧನೆಯನ್ನು ಮಾಡಬಹುದು. ಬದುಕೆನ್ನುವುದು ನಿರಂತರ ಹೋರಾಟ.

ಎಲ್ಲ ಸಮಸ್ಯೆಗಳಿಗೂ ಪರಿಹಾರ ಉತ್ತಮ ಶಿಕ್ಷಣ. ವಿವೇಕಾನಂದರ ಉನ್ನತ ಚಿಂತನೆಗಳನ್ನು ಎಲ್ಲ ಕಡೆ ಹರಡುವ ಪ್ರಯತ್ನ ಮಾಡಬೇಕು. ಗುರಿ ಮತ್ತು ದೃಢ ಸಂಕಲ್ಪ, ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿ, ದೇಶಪ್ರೇಮ ಮತ್ತು ಸಮಾಜ ಸೇವೆಯ ಕುರಿತು ಸ್ವಾಮಿ ವಿವೇಕಾನಂದರ ನುಡಿಗಳು ಸಾರ್ವಕಾಲಿಕ. ಅವರ ಮಾತುಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಪುರುಷ ಸಿಂಹಗಳಾಗುವುದು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ ಎಸ್. ಆರ್., ಉಪಪ್ರಾಂಶುಪಾಲ ವೇದಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ವಿದ್ಯಾರ್ಥಿನಿ ದಿವ್ಯಲಕ್ಷ್ಮಿ ಪ್ರಾರ್ಥಿಸಿದರು. ಉಪನ್ಯಾಸಕಿ ಡಾ. ಆರತಿ ಪಟ್ರಮೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.