Home Lead News ಎಐಗೆ ಕರ್ನಾಟಕದ ವೇದಿಕೆ

ಎಐಗೆ ಕರ್ನಾಟಕದ ವೇದಿಕೆ

ಬೆಂಗಳೂರು, ನ.೧೭- ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಟೆಕ್, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ. ಪ್ರಗತಿಪರ ನೀತಿಗಳು, ಬಲಿಷ್ಠ ಸಂಶೋಧನಾ ಸಂಸ್ಥೆಗಳು, ನವೋದ್ಯಮಗಳ ಬೆಳವಣಿಗೆ ಮತ್ತು ಕೌಶಲ ಹೊಂದಿರುವ ಮಾನವ ಸಂಪನ್ಮೂಲ ರಾಜ್ಯದ ಪ್ರಮುಖ ಶಕ್ತಿಗಳಾಗಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂದು ೨೯ನೇ ಬೆಂಗಳೂರು ಟೆಕ್ ಶೃಂಗಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತದ ಸಾಫ್ಟ್‌ವೇರ್ ಮತ್ತು ಸೇವಾ ರಫ್ತಿನ ಪ್ರತಿ ಐದು ಡಾಲರ್‌ನಲ್ಲಿ ಎರಡು ಡಾಲರ್ ಕರ್ನಾಟಕದ ಪಾಲಾಗಿದೆ. ಕಳೆದ ವರ್ಷ ರಾಜ್ಯದಿಂದ ೧೭೩ ಶತಕೋಟಿ ಡಾಲರ್ ಮೌಲ್ಯದ ಸಾಫ್ಟ್‌ವೇರ್ ಮತ್ತು ಸೇವಾ ರಫ್ತು ನಡೆದಿದೆ. ೨೦೨೫-೨೬ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ೯.೪ ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಆಕರ್ಷಿಸಿದ್ದು, ದೇಶದ ಒಟ್ಟು ಎಫ್‌ಡಿಐನಲ್ಲಿ ಶೇ.೨೬.೭ರಷ್ಟು ಪಾಲು ಹೊಂದಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ೧,೦೦೦ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕದಲ್ಲಿ ೨೪ ಸಾವಿರಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿದ್ದು, ದೇಶದ ಪ್ರತಿ ಐದು ಯುನಿಕಾರ್ನ್ ಕಂಪನಿಗಳಲ್ಲಿ ಎರಡು ರಾಜ್ಯದ ಮೂಲದವು. ಜಾಗತಿಕ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಬೆಂಗಳೂರು ಎಂಟನೇ ಸ್ಥಾನದಲ್ಲಿದೆ ಎಂದರು.

ಎಐ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ದೇಶದ ಮೊದಲ ಸರ್ಕಾರಿ ನೇತೃತ್ವದ ಎಐ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ಅದರ ಭಾಗವಾಗಿ ಎಐ ಹಬ್ ರೂಪಿಸಿ ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಮತ್ತು ಉದ್ಯಮ ವಲಯಕ್ಕೆ ಒಂದೇ ವೇದಿಕೆ ಕಲ್ಪಿಸಲಾಗುವುದು. ರಾಯಚೂರಿನ ಐಐಐಟಿಯಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿ ಉತ್ತರ ಕರ್ನಾಟಕದ ೧೩ ಜಿಲ್ಲೆಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಿಗೆ ಎಐ ತಂತ್ರಜ್ಞಾನ ಬಳಕೆಗೆ ಉತ್ತೇಜನ ನೀಡಲಾಗುವುದು. ಬೆಂಗಳೂರಿನಲ್ಲಿ ರೋಬೊಟಿಕ್ಸ್ ಮತ್ತು ಎಐ ಆವಿಷ್ಕಾರ ವಲಯವನ್ನೂ ಸ್ಥಾಪಿಸುವ ಯೋಜನೆಯಿದೆ ಎಂದು ಹೇಳಿದರು.

ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಎಲಿವೇಟ್ ಎನ್‌ಎಕ್ಸ್‌ಟಿ ಮೂಲಕ ತಲಾ ಒಂದು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಕಳೆದ ವರ್ಷದಿಂದ ೩೩ ಸಂಸ್ಥೆಗಳಿಗೆ ೩೦ ಕೋಟಿ ರೂ. ನೆರವು ನೀಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ೩೫ ಡೀಪ್‌ಟೆಕ್ ಉದ್ಯಮಗಳಿಗೆ ಇನ್ನೋವರ್ಸ್ ಕಾರ್ಯಕ್ರಮದಡಿ ನೆರವು ನೀಡಲಾಗುವುದು. ನವೋದ್ಯಮಗಳ ಉತ್ಪನ್ನಗಳನ್ನು ಸರ್ಕಾರವೇ ಮೊದಲ ಗ್ರಾಹಕರಾಗಿ ಖರೀದಿಸಲು ೨೫ ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸಂಶೋಧನೆ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆಗೆ ಜಾಗತಿಕ ಕಂಪನಿಗಳು ೨೩ ಸಾವಿರ ಕೋಟಿ ರೂ.ಗೂ ಅಧಿಕ ಹೂಡಿಕೆ ಮಾಡುತ್ತಿವೆ. ಧಾರವಾಡದಿಂದ ಮೈಸೂರಿನವರೆಗೆ ನಾಲ್ಕು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಜೈವಿಕ ಆರ್ಥಿಕತೆಯ ಮೌಲ್ಯ ೩೯.೨ ಶತಕೋಟಿ ಡಾಲರ್ ಆಗಿದ್ದು, ದೇಶದ ಜೈವಿಕ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲು ಐದನೇ ಒಂದು ಭಾಗವಾಗಿದೆ. ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲಾಗುವುದು ಎಂದರು.

ಈ ಬಾರಿಯ ಶೃಂಗಸಭೆಯಲ್ಲಿ ೭೫ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿದ್ದು, ಎಐ, ಡೀಪ್‌ಟೆಕ್, ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ರೋಬೊಟಿಕ್ಸ್ ಕ್ಷೇತ್ರಗಳ ಆವಿಷ್ಕಾರಗಳಿಗೆ ಜಾಗತಿಕ ವೇದಿಕೆಯಾಗಲಿದೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ಜಾಗತಿಕ ಉದ್ಯಮಿಗಳು ಮತ್ತು ಸಂಶೋಧಕರಿಗೆ ಮುಖ್ಯಮಂತ್ರಿ ಆಹ್ವಾನ ನೀಡಿದರು.