
ತುಮಕೂರು, ಸೆ. ೪- ಹಕ್ಕಿಪಿಕ್ಕಿ ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಶಾಸಕ ಬಿ. ಸುರೇಶ್‌ಗೌಡ ಹೇಳಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಸಬಾ ಹೋಬಳಿಯ ಅಮಲಾಪುರ ಸರ್ವೆ ನಂಬರ್ ೩೧ ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸುಮಾರು ೨ ಕೋಟಿ ರೂ.ಅಂದಾಜು ವೆಚ್ಚದ ಮೊತ್ತದಲ್ಲಿ ಹಂದಿ ಜೋಗರು, ಹಕ್ಕಿ-ಪಿಕ್ಕಿ ಜನಾಂಗದವರಿಗೆ ನೂತನವಾಗಿ ಬಡಾವಣೆಗಳ ನಿರ್ಮಾಣ ಮಾಡಲು ಸಿ.ಸಿ ರಸ್ತೆ ಹಾಗೂ ಸಿ.ಸಿ ಚರಂಡಿ ಕಾಮಗಾರಿ ಗೆಸುರೇಶ್‌ಗೌಡ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ವಿಧಾನಸಭೆಯಲ್ಲಿ ಹೋರಾಟ ಮಾಡಿ ಇಲ್ಲಿನ ಹಕ್ಕಿಪಿಕ್ಕಿ, ಹಂದಿ ಜೋಗರಿಗೆ ನಿವೇಶನ ಹಕ್ಕು ಪತ್ರ ಮಂಜೂರು ಮಾಡಿಸಿ ವಿತರಣೆ ಮಾಡಿದ್ದೇನೆ. ಈಗ ಇಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಸರ್ಕಾರದಿಂದ ನಿಮಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನೀವು ಇನ್ನೂ ಗುಡಿಸಿಲಿನಲ್ಲಿ ವಾಸ ಮಾಡುತ್ತಿರುವಿರಿ, ನಿಮಗೆ ಮನೆ ಕಟ್ಟಿಸಿಕೊಟ್ಟು, ಬಡಾವಣೆಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯ ಒದಗಿಸುತ್ತೇವೆ. ಸರ್ಕಾದಿಂದ ಎಲ್ಲ ಸವಲತ್ತು ನೀಡಿದರೂ ಬಡತನ ನಿವಾರಣೆ ಮಾಡಿಕೊಳ್ಳುವುದು ನಿಮ್ಮ ಕೈಯ್ಯಲ್ಲಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಣದ ಜತೆಗೆ ಅವರಿಗೆ ಸಂಸ್ಕಾರ ಕಲಿಸಬೇಕು. ಅವರು ಮುಂದೆ ಉನ್ನತ ಸ್ಥಾನ ಪಡೆಯಲು ಪ್ರೋತ್ಸಾಹ ನೀಡಬೇಕು. ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸಹಕಾರ ನೀಡಿದ್ದಾರೆ, ಅವರಿಗೆ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾನಿಕಟಪೂರ್ವ ಅಧ್ಯಕ್ಷ ಅರಕೆರೆ ರವೀಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ದಶರಥ, ಅನಿಲ್ ಪಟೇಲ್, ಶಿವಕುಮಾರ್, ಆರಿಫ್ ಪಾಷ, ಮುಖಂಡರಾದ ಗುರುಸಿದ್ದಪ್ಪ, ಚಂದ್ರಣ್ಣ, ದಯಾನಂದ, ಕುಚ್ಚಂಗಿ ಶ್ರೀನಿವಾಸ್, ನಾಗೇಶ್, ಕುಮಾರ್, ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ತಿಲಕ್ ಮತ್ತಿತರರು ಉಪಸ್ಥಿತರಿದ್ದರು.


































