Home ಜಿಲ್ಲೆ ಕಲಬುರಗಿ ಸಚಿವ ಸಂಪುಟ ಸಭೆ ನಡೆಸಲು ದಯಾನಂದ ಪಾಟೀಲ ಆಗ್ರಹ

ಸಚಿವ ಸಂಪುಟ ಸಭೆ ನಡೆಸಲು ದಯಾನಂದ ಪಾಟೀಲ ಆಗ್ರಹ

ಕಲಬುರಗಿ,ಆ.20-ಕಲ್ಯಾಣ ಕರ್ನಾಟಕ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರ, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದು, ಈ ಭಾಗದಲ್ಲಿ ಒಂದು ದಿನದ ಸಚಿವ ಸಂಪುಟ ಸಭೆ ನಡೆಸಿ ರೈತರ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ನವ ಕರ್ನಾಟಕ ರೈತ ಸಂಘದ ಅಧ್ಯಕ್ಷ ದಯಾನಂದ ಸಿ.ಪಾಟೀಲ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಈ ಭಾಗದಲ್ಲಿ ಅತಿವೃಷ್ಟಿಯಿಂದ ಆ ನಂತರ ಮಳೆ ಕೊರತೆಯಿಂದ ಬೆಳೆ ಹಾಳಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಾರಿ ಮಳೆಯಾಗದೆ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಸಾಲಬಾಧೆ ತಾಳದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಒಂದು ದಿನದ ಸಚಿವ ಸಂಪುಟ ಸಭೆ ನಡೆಸಿ ಬರಗಾಲ ಘೋಷಣೆ, ರೈತರ ಸಾಲ ಮನ್ನಾ, ಉಳಿದ ಬೆಳೆ ವಿಮೆ ಹಣ ಬಿಡುಗಡೆ, ಬರ ಪರಿಹಾರ ಒದಗಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕಲ್ಯಾಣ ಕರ್ನಾಟಕ ಭಾಗದ ರೈತರು, ಕೂಲಿಕಾರ್ಮಿಕರು ಮತ್ತು ಮಧ್ಯಮವರ್ಗದವರು ಸೇರಿ ಉಗ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ ಗುತ್ತೇದಾರ, ಯುವ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಜಿಲ್ಲಾ ಯುವ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಚೌಧರಿ, ಶಿವಾನಂದ ಮಠಪತಿ, ಅಮರ್ ಝಳಕಿ, ನಾಗೇಂದ್ರ ದಂಡೋತಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.