Home ಜಿಲ್ಲೆ ಕಲಬುರಗಿ ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹಿಸಿ “ಕಲಬುರಗಿ ಬಂದ್”

ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹಿಸಿ “ಕಲಬುರಗಿ ಬಂದ್”

ಕಲಬುರಗಿ,ಆ.20-ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ-ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಇಂದು ಕರೆ ನೀಡಿದ್ದ “ಕಲಬುರಗಿ ಬಂದ್”ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತೊಳಿಸಿದ್ದರಿಂದ ಬಸ್‍ಗಳು ಮತ್ತು ಪ್ರಯಾಣಿಕರಿಲ್ಲದೆ ಕೇಂದ್ರ ಬಸ್ ನಿಲ್ದಾಣ ಭಣಗುಡುತ್ತಲಿತ್ತು.
ನಗರದ ಗಂಜ್ ಪ್ರದೇಶದಲ್ಲೂ ರೈತರು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಬಂದ್ ಹಿನ್ನೆಲೆಯಲ್ಲಿ ಗಂಜ್ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಇನ್ನುಳಿದಂತೆ ನಗರದ ಪ್ರಮುಖ ಜನನಿಬಿಡ ಪ್ರದೇಶಗಳಾದ ಸುಪರ್ ಮಾರ್ಕೆಟ್ ಸೇರಿದಂತೆ ಇತರೆಡೆ ಬಂದ್‍ಗೆ ನೀರಸ ಪ್ರತಿಕ್ರಿಯೆ ಕಂಡು ಬಂತು.
ಸೂಪರ್ ಎಲ್‍ನಿನೋ ಪರಿಣಾಮದಿಂದ ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಮುಂಗಾರು ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ. ಬರ ಘೋಷಿಸಿ ತುರ್ತು ಕ್ರಮ ಕೈಗೊಳ್ಳಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಸರ್ಕಾರ ಕೂಡಲೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಬೇಕು, ಪ್ರತಿ ಎಕರೆಗೆ ತಲಾ 50 ಸಾವಿರ ಪರಿಹಾರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಂಗಾರು ಮಳೆಯ ಕೊರತೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೆಸರು, ಉದ್ದು, ಸೋಯಾಬೀನ್, ಎಳ್ಳು, ಹತ್ತಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಸಮರ್ಪಕವಾಗಿ ಬೆಳವಣಿಗೆಯಾಗದೆ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಬರ ಪರಿಹಾರ ಘೋಷಿಸುವಲ್ಲಿ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ-ಹೋರಾಟ ಕರ್ನಾಟಕದ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ರೈತ ಮುಖಂಡರಾದ ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ನಾಗೇಂದ್ರ ಥಂಬೆ, ಎಂ. ಬಿ. ಸಜ್ಜನ್, ಕರೆಪ್ಪ ಕರಗೊಂಡ, ಸಿದ್ದು ಎಸ್. ಎಲ್., ಪದ್ಮಿನಿ ಕಿರಣಗಿ, ಅಶ್ಫಾಕ್ ಮುಲ್ಲಾ ಸೇರಿದಂತೆ ಹಲವಾರು ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ರೈತ ಸಂಘ, ಜೈ ಕನ್ನಡಿಗರ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಡಿಎಸ್‍ಎಸ್, ಕರ್ನಾಟಕ ನವ ನಿರ್ಮಾಣ ಸೇನೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬಂದ್ ಹಿನ್ನೆಲೆಯಲ್ಲಿ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.