
ಕಲಬುರಗಿ,ಅ.14: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಸಮಾಜ ಕಾರ್ಯ ವಿಭಾಗವು ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಹಯೋಗದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನ2026 ಅನ್ನು ಆಚರಿಸಿತು. ವಾಸ್ತವ ಅನುಭವಗಳಿಗೆ ಕಿವಿಗೊಡೋಣ: ನೈಜ ಧ್ವನಿಗಳು, ನೈಜ ಬದಲಾವಣೆಗಳು ಎಂಬ ಆಶಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ದುಶ್ಚಟಗಳು ಅಥವಾ ಇತರ ಯಾವುದೇ ಕಾರಣಗಳಿಂದ ಮಾನಸಿಕವಾಗಿ ಬಳಲುತ್ತಿದ್ದರೆ ಭಯಪಡದೆ, ಹಿಂಜರಿಯದೆ ವಿಶ್ವವಿದ್ಯಾಲಯದ ಮಾನಸಿಕ ಆರೋಗ್ಯ ಆಪ್ತಸಮಾಲೋಚನಾ ಕೇಂದ್ರದ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಆಪ್ತಸಮಾಲೋಚಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಅಗತ್ಯವಿದ್ದಾಗ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಪಡೆಯಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರು ಮಾತನಾಡಿ, ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಘನತೆ, ಹಕ್ಕುಗಳು ಮತ್ತು ಗೌಪ್ಯತೆಯನ್ನು ರಕ್ಷಿಸಲು ಕಾನೂನಿನಲ್ಲಿ ಹಲವು ಅವಕಾಶಗಳಿವೆ ಎಂದು ವಿವರಿಸಿದರು. ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ2017ರ ಅಡಿಯಲ್ಲಿ ಲಭ್ಯವಿರುವ ಚಿಕಿತ್ಸೆಯ ಹಕ್ಕು, ಗೌಪ್ಯತೆಯ ರಕ್ಷಣೆ, ಸಮಾನತೆ, ವೈದ್ಯಕೀಯ ದಾಖಲೆಗಳ ಸಂರಕ್ಷಣೆ ಹಾಗೂ ಉಚಿತ ಕಾನೂನು ನೆರವು ಸೇರಿದಂತೆ ವಿವಿಧ ಕಾನೂನುಬದ್ಧ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ತಾರತಮ್ಯವಿಲ್ಲದೆ ಗೌರವದಿಂದ ಕಾಣಬೇಕು ಮತ್ತು ಅವರು ತಮ್ಮ ಹಕ್ಕುಗಳ ಕುರಿತು ಅರಿವು ಹೊಂದಿರಬೇಕು ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ. ರವಿಕಾಂತಿ ಕ್ಯಾತನಾಳ ಅವರು ಮಾತನಾಡಿ, ವಿದ್ಯಾರ್ಥಿಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ತಾಳ್ಮೆ, ಮನಃಶಾಂತಿ, ದೈಹಿಕ ವ್ಯಾಯಾಮ, ನಡಿಗೆ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ವಿಶ್ವವಿದ್ಯಾಲಯದ ಆಪ್ತಸಮಾಲೋಚನಾ ಕೇಂದ್ರ, ಸಮೀಪದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಗತ್ಯವಿದ್ದಲ್ಲಿ ಉಚಿತ ಸಹಾಯವಾಣಿ (14466)ಸಂಖ್ಯೆಯ ಮೂಲಕವೂ ನೆರವು ಪಡೆದುಕೊಳ್ಳಬಹುದು ಎಂದು ಅವರು ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಭುಕಿರಣ್ ಗೋಗಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ. ಇರ್ಫಾನ್ ಮಹಾಗವಿ ಅವರು ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಸಮಸ್ಯೆಗಳ ಕುರಿತು ಜಾಗೃತಿ ಮತ್ತು ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಆರೋಗ್ಯ ಸವಾಲುಗಳನ್ನು ಗುರುತಿಸಿ ನಿಭಾಯಿಸುವ ವಿಧಾನಗಳ ಕುರಿತು ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಯುಕೆಯ ಸಾಮಾಜಿಕ ಮತ್ತು ವರ್ತನೆಯ ವಿಜ್ಞಾನಗಳ ಶಾಲೆಯ ಡೀನ್ ಪೆÇ್ರ. ಪವಿತ್ರಾ ಆರ್. ಆಲೂರು ಅವರು ಸ್ವಾಗತ ಭಾಷಣ ಮಾಡಿದರು. ಡಾ. ಶಿವಮೂರ್ತಿ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಸೇರಿದಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪೆÇ್ರ. ವಿಜಯೇಂದ್ರ ಪಾಂಡೆ, ಪೆÇ್ರ. ಚನ್ನವೀರ್ ಆರ್. ಎಂ., ಪೆÇ್ರ. ಜಯವೇಲ್, ಪೆÇ್ರ. ವೆಂಕಟರಾವ್ ಎಂ. ಪಲಾಟೆ, ಡಾ. ಅಸ್ತಾ, ಡಾ. ಭಾಗ್ಯಶ್ರೀ, ಡಾ. ರವಿ ಕಾಂಗೈ, ಡಾ. ಶ್ರೀಲಕ್ಷ್ಮಿ, ಡಾ. ವಾಣಿಶ್ರೀ, ಡಾ. ರಾಘವೇಂದ್ರ ಬೋನಾಳ, ಡಾ. ಯಧುಕೃಷ್ಣನ್ ಹಾಗೂ ಡಾ. ಮಹಾಲಕ್ಷ್ಮಿ ಕೆ. ಆರ್. ಸೇರಿದಂತೆ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.























