
ಹುಳಿಯಾರು, ಸೆ. ೪- ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಎಂದರೆ ಬರಿ ಅಕ್ಷರ ಕಲಿಯುವ ತಾಣವಲ್ಲ; ಅದು ಅದೆಷ್ಟೋ ಮುಗ್ಧ ಮನಸ್ಸುಗಳ ಭವಿಷ್ಯದ ಕನಸುಗಳಿಗೆ ನೀರೆರೆಯುವ ಜೀವಸೆಲೆ. ತುಮಕೂರು ಜಿಲ್ಲೆಯ ಕಲ್ಪತರು ನಾಡಿನ ದಸೂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಇಂತಹದ್ದೇ ಒಂದು ಅಪರೂಪದ, ಅರ್ಥಪೂರ್ಣ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಲಾಗಿದೆ.
ಹೌದು, ರೈತ ಸಂಘದ ಅಧ್ಯಕ್ಷ ದಸೂಡಿ ನಾಗರಾಜ್ ಅವರ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳ ಒಂದನೇ ತಾರೀಕಿನಂದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗುವ ’ತಿಂಗಳ ತಾರೆಯರು’ ಎಂಬ ವಿನೂತನ ಶೈಕ್ಷಣಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಕೇವಲ ಪರೀಕ್ಷೆಯ ಅಂಕಗಳನ್ನಷ್ಟೇ ಪರಿಗಣಿಸಿ ಪ್ರತಿಭೆಯನ್ನು ಅಳೆಯುವ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ’ತಿಂಗಳ ತಾರೆಯರು’ ಕಾರ್ಯಕ್ರಮವು ಪ್ರತಿಯೊಬ್ಬ ಮಗುವಿನ ಸರ್ವಾಂಗೀಣ ವಿಕಸನಕ್ಕೆ ಹೊಸ ದಾರಿ ದೀಪವಾಗಿದೆ. ಒಂದು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಯ ಶಾಲಾ ಹಾಜರಾತಿ, ನಡೆ-ನುಡಿ, ಸಹಪಾಠಿಗಳೊಂದಿಗಿನ ಸೌಹಾರ್ದಯುತ ಒಡನಾಟ, ಕಲಿಕೆಯಲ್ಲಿ ತೋರಿಸುವ ನಿರಂತರ ಉತ್ಸಾಹ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೋರುವ ಶ್ರದ್ಧೆ-ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಶಾಲೆಯ ಶಿಕ್ಷಕರೇ ಪ್ರತಿಯೊಂದು ತರಗತಿಯಿಂದ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತಾರೆ.
ಸಾಮಾನ್ಯವಾಗಿ ಹೊಲಗದ್ದೆಗಳಲ್ಲಿ ಬೆವರು ಸುರಿಸುವ ರೈತ ಮುಖಂಡರೊಬ್ಬರು, ಶಿಕ್ಷಣ ಸಂಸ್ಥೆಯೊಂದರಲ್ಲಿ ಇಂತಹ ಸಂಸ್ಕಾರಯುತ ಮತ್ತು ಪ್ರೇರಣಾದಾಯಿ ಚಿಂತನೆಗೆ ಕೈಹಾಕಿರುವುದು ಅತ್ಯಂತ ಶ್ಲಾಘನೀಯ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಾಗರಾಜ್ ದಸೂಡಿ ಅವರೇ ತಮ್ಮ ವೈಯಕ್ತಿಕ ವೆಚ್ಚದಲ್ಲಿ ನೋಟ್ ಪುಸ್ತಕ, ಜಾಮೆಟ್ರಿ ಬಾಕ್ಸ್ ಸೇರಿದಂತೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ನೀಡಿ ಗೌರವಿಸುತ್ತಿರುವುದು ಕೇವಲ ಪೋತ್ಸಾಹವಲ್ಲ; ಅದು ಗ್ರಾಮೀಣ ಪ್ರತಿಭೆಗಳಿಗೆ ನೀಡುವ ಪ್ರೀತಿಯ ಆಸರೆ.
ಈ ಸಮಾರಂಭವು ಶಾಲೆಯ ಅಂಗಳದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಈ ತಿಂಗಳ ಮೊದಲ ’ತಿಂಗಳ ತಾರೆಯರು’ ಆಗಿ, ೮ ನೇ ತರಗತಿಯಿಂದ ಮಹಾಲಕ್ಷ್ಮಿ, ೯ ನೇ ತರಗತಿಯಿಂದ ಶೃಂಗ, ೧೦ ನೇ ತರಗತಿಯಿಂದ ಲಕ್ಷ್ಮಿ ಈ ಮೂವರು ವಿದ್ಯಾರ್ಥಿನಿಯರು ತಮ್ಮ ಅತ್ಯುತ್ತಮ ಶಿಸ್ತು ಮತ್ತು ಸಾಧನೆಯಿಂದ ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಸ್ವೀಕರಿಸಿ, ಶಾಲೆಯ ಇತರ ನೂರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿ ಮಿಂಚಿದರು.
ಲೇಖಕ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮರಿಯಪ್ಪ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ರುದ್ರೇಶ್, ಗ್ರಂಥಪಾಲಕಿ ರತ್ನಮ್ಮ, ಸರ್ಕಾರಿ ಆಸ್ಪತ್ರೆಯ ಶುಶ್ರೂಷಕಿ ನೇತ್ರಾವತಿ, ಕುಂಬಾರ ಸಂಘದ ಅಧ್ಯಕ್ಷ ಡಿ.ಎಸ್. ರವಿ, ಮೆಡಿಕಲ್ ರಾಘು, ಮಾದಪ್ಪರ ಹನುಮಯ್ಯ, ಗ್ರಾ.ಪಂ. ಎಸ್‌ಡಿಎ ಮಧು, ಕಾವ್ಯ ಕಿರಣ್, ರಾಧಾ, ಸೇರಿದಂತೆ ಶಾಲೆಯ ಸಹ ಶಿಕ್ಷಕರು ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿ ವಿದ್ಯಾರ್ಥಿಗಳನ್ನು ಹಾರೈಸಿದರು.
ಸಂಸ್ಕಾರ ಮತ್ತು ಸಂಸ್ಕೃತಿಯ ಸಮ್ಮಿಲನ
ಶಿಕ್ಷಣದ ಮೂಲ ಉದ್ದೇಶ ಕೇವಲ ಸಾಕ್ಷರತೆಯಲ್ಲ, ಮಗುವಿನಲ್ಲಿ ಮಾನವೀಯ ಮೌಲ್ಯ ಹಾಗೂ ಸಂಸ್ಕಾರಗಳನ್ನು ಬಿತ್ತುವುದು. ವಿದ್ಯಾರ್ಥಿಗಳಲ್ಲಿ ಧನಾತ್ಮಕ ಸ್ಪರ್ಧಾತ್ಮಕತೆಯನ್ನು ಬೆಳೆಸುವುದರ ಜತೆಗೆ, ಪ್ರತಿ ತಿಂಗಳು ತಾವೂ ಸಹ ಆ ವೇದಿಕೆಯಲ್ಲಿ ಗೌರವಿಸಲ್ಪಡಬೇಕು ಎನ್ನುವ ಹೊಸ ಹುಮ್ಮಸ್ಸನ್ನು ಪ್ರತಿಯೊಬ್ಬ ಮಗುವಿನಲ್ಲೂ ಮೂಡಿಸುವ ನಿಟ್ಟಿನಲ್ಲಿ ’ತಿಂಗಳ ತಾರೆಯರು’ ಕಾರ್ಯಕ್ರಮವು ಆಯೋಜಿಸಲಾಗಿದೆ. ಅಲ್ಲದೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ಇದು ಸಹಕಾರಿಯಾಗಲಿದೆ ಎಂದು ರೈತ ಮುಖಂಡ ದಸೂಡಿ ನಾಗರಾಜು ಹೇಳಿದ್ದಾರೆ.


































