
ಆಳಂದ: ವಿಶ್ವಕರ್ಮ ಸಮಾಜದ ಕಲೆ, ಕೌಶಲ, ಪರಂಪರೆ ಹಾಗೂ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ವಿಶ್ವಕರ್ಮ ಘಟಕದ ಆಶ್ರಯದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ, ಸಮಾಜದ ಸಮಾವೇಶ ಹಾಗೂ ವಿಶ್ವಕರ್ಮ ಕಲಾಚೇತನ ಪ್ರಶಸ್ತಿ ಪ್ರದಾನ ಸಮಾರಂಭ ಪಟ್ಟಣದ ಹಳೆಯ ಚೆಕ್‍ಪೋಸ್ಟ್‍ನ ರಾಯಲ್ ಪ್ಯಾಲೇಸ್‍ನಲ್ಲಿ ಭಾನುವಾರ ಅದ್ಧೂರಿಯಾಗಿ ನಡೆಯಿತು.
ಸಮಾವೇಶಕ್ಕೂ ಮುನ್ನ ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಬೆಳಗಿನ ಜಾವ ವಿಶೇಷ ಪೂಜಾ ಮಹೋತ್ಸವ ನೆರವೇರಿತು. ಬಳಿಕ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ರಥಯಾತ್ರೆಗೆ ಚಾಲನೆ ನೀಡಿದರು. ಕಾಳಿಕಾದೇವಿ ಮಂದಿರದಿಂದ ಆರಂಭವಾದ ಭವ್ಯ ಮೆರವಣಿಗೆಯಲ್ಲಿ 5 ಅಡಿ ಎತ್ತರದ ಭಗವಾನ್ ಶ್ರೀ ವಿಶ್ವಕರ್ಮರ ಕಂಚಿನ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಕೊಂಡೊಯ್ಯಲಾಯಿತು. ಕುಂಭ-ಕಳಸಗಳೊಂದಿಗೆ ಸುಮಾರು 2 ಕಿ.ಮೀ. ಸಾಗಿದ ಮೆರವಣಿಗೆಯಲ್ಲಿ ಸಮಾಜದ ಮಹಿಳೆಯರು, ಯುವಕರು ಸೇರಿದಂತೆ ನೂರಾರು ಸಮಾಜಬಾಂಧವರು ಪಾಲ್ಗೊಂಡು ಸಂಭ್ರಮಿಸಿದರು.
ವಿವಿಧ ವಾದ್ಯಗಳ ನಾದ, ಜಯಘೋಷ ಹಾಗೂ ಭಕ್ತಿಯ ವಾತಾವರಣದ ನಡುವೆ ಮೆರವಣಿಗೆ ರಾಯಲ್ ಪ್ಯಾಲೇಸ್‍ವರೆಗೆ ಸಾಗಿತು.
ಕಲಘಟಗಿಯ ಉದ್ಯಮಿ ಶ್ರೀಶೈಲ ಸುತಾರ ಅವರು ಧ್ವಜಾರೋಹಣ ನೆರವೇರಿಸಿದರು. ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವ ಪೋದ್ದಾರ ಸೇರಿದಂತೆ ಸಮಾಜದ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಅಭಿವೃದ್ಧಿಗೆ ಒಗ್ಗಟ್ಟೇ ಶಕ್ತಿ:
ಸಮಾವೇಶದ ನೇತೃತ್ವ ವಹಿಸಿದ್ದ ಶ್ರೀಶೈಲ ಎಸ್. ಸುತಾರ್ ಮಾತನಾಡಿ, ವಿಶ್ವಕರ್ಮ ಸಮಾಜದವರು ಇಂದಿನ ಬದಲಾಗುತ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಒಗ್ಗೂಡಬೇಕು ಎಂದು ಕರೆ ನೀಡಿದರು. ಸಮಾಜದ ಯುವಜನರು ಶಿಕ್ಷಣದತ್ತ ಹೆಚ್ಚಿನ ಗಮನಹರಿಸಿ, ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಕೌಶಲವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆದುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಸರಸಂಬಾದ ಕಲ್ಯಾಣರಾವ್ ಪಾಟೀಲ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಎಕದಂಡಗಿ ಮಠದ ಸುರೇಂದ್ರನಾಥ ಮಹಾಸ್ವಾಮಿಗಳು, ಆಳಂದದ ಸಿದ್ಧೇಶ್ವರ ಶಿವಾಚಾರ್ಯರು, ಬ್ರಹ್ಮಾನಂದ ಮಹಾಸ್ವಾಮಿಗಳು ಹಾಗೂ ಪ್ರಣವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಸಮಾವೇಶದ ಸರ್ವಾಧ್ಯಕ್ಷತೆಯನ್ನು ಸರಸಂಬಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುರೇಖಾ ಎನ್. ಸುತಾರ ವಹಿಸಿದ್ದರು. ವಿಶ್ವಕರ್ಮ ತಾಲೂಕು ಅಧ್ಯಕ್ಷ ಬಸವರಾಜ ಕೆ. ವಿಶ್ವಕರ್ಮ ಅಧ್ಯಕ್ಷತೆ ವಹಿಸಿದ್ದರು.
ಕಲೆಗಾರ ವಿ.ಕೆ. ಸಲಗರದ ಗಂಗಾಧರ ವಿ. ವಿಶ್ವಕರ್ಮ, ದರ್ಗಾಶಿರೂರದ ಅಶೋಕ ಎಲ್. ಸುತಾರ, ಕಲಬುರಗಿಯ ಗಾಯತ್ರಿ ಚ. ಶಿಲ್ಪಿ, ತಾಜಸುಲ್ತಾನಪೂರದ ರಮೇಶ ಪಿ. ಬಡಿಗೇರ ಹಾಗೂ ಅಫಜಲಪುರದ ರವಿಕುಮಾರ ಆರ್. ಬಡಿಗೇರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಶ್ವಕರ್ಮ ಮಹಿಳಾ ಘಟಕದ ಅಧ್ಯಕ್ಷೆ ವೈಶಾಲಿ ಎ. ಪೋದ್ದಾರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಮುದಾಯದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂಬ ಆಶಯವೂ ಸಮಾವೇಶದಲ್ಲಿ ವ್ಯಕ್ತವಾಯಿತು.
ಸಮಾರಂಭದಲ್ಲಿ ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ತಾಪಂ ಮಾಜಿ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ, ನಿಂಬಾಳದ ಲಿಂಗರಾಜ ಪಾಟೀಲ, ರಮೇಶ ಆರ್. ಮಾಡಿಯಾಳರ್, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವ ಪೋದ್ದಾರ, ಮೌನೇಶ್ವರ ಟ್ರಸ್ಟ್ ಅಧ್ಯಕ್ಷ ರಘವೀರ ಸೋನರ್, ಮನೋಹರ್ ಎಸ್. ಸೋನಾರ, ಜಿಪಂ ಮಾಜಿ ಸದಸ್ಯೆ ಪೂಜಾ ಲೋಹಾರ, ರಾಜಕುಮಾರ ಸುತಾರ, ರಾಮಣ್ಣ ಸುತಾರ,ಅಣ್ಣಾರಾವ್ ಪೋದ್ದಾರ ಪ್ರಮುಖರು ಉಪಸ್ಥಿತರಿದ್ದರು.
ವಲಯ ಘಟಕದ ಅಧ್ಯಕ್ಷರಾದ ಗುರುನಾಥ ಈ ಸುತಾರ, ಗಣಪತಿ ಎನ್. ಸುತಾರ, ಆನಂದ ಎನ್. ಸುತಾರ, ಲಕ್ಷ್ಮೀಕಾಂತ ಎನ್. ಸುತಾರ, ಸುಧಾಕರ ಸುತಾರ, ಮಲ್ಲಿನಾಥ ಸುತಾರ, ಸಿದ್ರಾಮಪ್ಪ ಎ. ಸುತಾರ ಪಟ್ಟಣ ಸೇರಿ ಗ್ರಾಮೀಣ ಭಾಗದಿಂದ ವಿಶ್ವಕರ್ಮ ಬಾಂಧವರು ಆಗಮಿಸಿದ್ದರು.
ಡಾ. ಮೋನಪ್ಪ ಎಲ್. ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ವೇದಪಾಠಕ ಸ್ವಾಗತಿಸಿದರು. ಶಿವಲಿಂಗಪ್ಪ ವ್ಹಿ. ಮಂಟಗಿ ಹಾಗೂ ಸುಜ್ಞಾನಿ ಎಂ. ಪೋದ್ದಾರ ನಿರೂಪಿಸಿದರು. ವೀರೇಶ ಎಂ. ಪೋದ್ದಾರ ವಂದಿಸಿದರು.





















