Home ಜಿಲ್ಲೆ ತುಮಕೂರು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಅವಶ್ಯಕ

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ಕ್ರೀಡೆ ಅವಶ್ಯಕ

ತುಮಕೂರು, ಸೆ. ೪- ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗಿರುವುದರಿಂದ ಕ್ರೀಡಾಭ್ಯಾಸವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ.ಎಂ. ಹೇಳಿದರು.


ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಾಗೂ ವಿದ್ಯಾನಿಕೇತನ ಪ್ರೌಢಶಾಲೆ ಸಂಚಾಲಕರಾಗಿ ಆಯೋಜಿಸಿದ್ದ ನಗರ ವಲಯ-೩ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆ ಜತೆಗೆ ಕ್ರೀಡೆಯೂ ಅವಶ್ಯಕವಾಗಿದೆ. ಕ್ರೀಡೆಯಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಹೊಂದಬಹುದು. ಕ್ರೀಡೆ ಎಂಬುದು ಸ್ಪರ್ಧಾತ್ಮಕ ಮತ್ತು ಕೌಶಲ್ಯತೆಯಿಂದ ಕೂಡಿರುವ ಚಟುವಟಿಕೆಯಾಗಿದ್ದು, ಪ್ರತಿಯೊಬ್ಬರು ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ ಹಾಗೂ ಯಶಸ್ಸು ಕಾಣಲು ಸಹಕಾರಿಯಾಗಲಿದೆ. ಕ್ರೀಡೆಯಲ್ಲಿ ಗೆಲುವು-ಸೋಲು ಸರ್ವೇ ಸಾಮಾನ್ಯವಾಗಿದೆ ಎಂದು ಹೇಳಿದರು.


ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎನ್.ಚನ್ನಬಸವಪ್ರಸಾದ್ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂಬ ಮಾತಿನಂತೆ ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿ ಗೆಲ್ಲಬೇಕೆಂಬ ಛಲದಿಂದ ಆಟವಾಡಿದರೆ ದೇಹ-ಮನಸ್ಸು ಪರಿಪಕ್ವತೆ ಹೊಂದಿ ವ್ಯಕ್ತಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಕೆ.ಜಿ. ಮುನಿಗಂಗಪ್ಪ, ಕೆ.ವಿ ಶ್ರೀನಿವಾಸ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಮಹಾವೀರ್ ಜೈನ್, ಶೈಕ್ಷಣಿಕ ಸಂಯೋಜಕರಾದ ಮಿಥಿಲಾ, ಪ್ರಾಂಶುಪಾಲರಾದ ಸುಷ್ಮಾ, ಮುಖ್ಯೋಪಾಧ್ಯಾಯನಿ ವನಿತಾ ಕೆ. ಮತ್ತಿತರರು ಉಪಸ್ಥಿತರಿದ್ದರು.