
ಬೇತಮಂಗಲ.೧೫-ಎನ್.ಜಿ. ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾತೇನಹಳ್ಳಿ ಗ್ರಾಮದ ಪುರಾತನ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ನಾಡಿನಲ್ಲಿ ಉತ್ತಮ ಮಳೆ-ಬೆಳೆ ಸಮೃದ್ಧವಾಗಿರಲಿ ಮತ್ತು ಬರಗಾಲದ ಭೀತಿ ನೀಗಲಿ ಎಂದು ವಿಶೇಷ ಪೂಜೆ ಹಾಗೂ ಹೋಮ-ಹವನಗಳನ್ನು ಸಮಾಜ ಸೇವಕ ಹಾಗೂ ಆರ್.ಕೆ. ಫೌಂಡೇಶನ್ ಅಧ್ಯಕ್ಷ ವಿ. ಮೋಹನ್ ಕೃಷ್ಣ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ಅವರು,ಮುಂದಿನ ದಿನಗಳಲ್ಲಿ ರೈತ ಮುಖಂಡರೊಂದಿಗೆ ಚರ್ಚಿಸಿ,ಮಳೆ ಬಾರದಿದ್ದರೆ ಕೆಜಿಎಫ್ ಅರ್ಚಕರೊಂದಿಗೆ ಮಾತನಾಡಿ,ಇನ್ನೂ ದೊಡ್ಡ ಮಟ್ಟದಲ್ಲಿ ರೈತರಿಗಾಗಿ ವಿಶೇಷ ಪೂಜೆಯನ್ನು ಮಾಡಿಸುವುದಾಗಿ ತಿಳಿಸಿದರು.
ಪ್ರಸ್ತುತ ಕ್ಷೇತ್ರದಲ್ಲಿ ಎದುರಾಗಿರುವ ಹಾಗೂ ಎದುರಾಗಬಹುದಾದ ಬರಗಾಲದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಮತ್ತು ರೈತರ ಕಷ್ಟ-ನಷ್ಟಗಳನ್ನು ದೂರ ಮಾಡಲು ದೇವರಲ್ಲಿ ಪ್ರಾರ್ಥಿಸಲಾಯಿತು.
ಧಾರ್ಮಿಕ ಕಾರ್ಯಕ್ರಮ: ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಮಳೆ ಹಾಗೂ ಸಮೃದ್ಧಿಗಾಗಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಯಜ್ಞ-ಯಾಗಾದಿಗಳನ್ನು ನಡೆಸಲಾಯಿತು.
ಮಾಧ್ಯಮ ಮತ್ತು ರೈತರ ಸಮಸ್ಯೆ, ರೈತರ ಕಷ್ಟಗಳು ಹಾಗೂ ಸಂಕಷ್ಟಗಳನ್ನು ಮಾಧ್ಯಮದ ಮೂಲಕ ಸಮಾಜದ ಗಮನಕ್ಕೆ ತರಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾಧ್ಯಮದವರು ಸಹ ಕ್ಷೇತ್ರದ ರೈತರ ಸಮಸ್ಯೆಗಳಿಗೆ ಧ್ವನಿ ಆಗಬೇಕು ಸರ್ಕಾರದಿಂದ ರೈತರಿಗೆ ನಷ್ಟ ಪರಿಹಾರ ಒದಗಿಸುವಂತಹ ಗಮನ ಕೊಡಬೇಕೆಂದು ಹೇಳಿದರು.
ವರುಣ ದೇವರ ಕೃಪೆಗಾಗಿ ಪ್ರಾರ್ಥನೆ: ಕೆಜಿಎಫ್ ಭಾಗದ ರೈತರು ಸಂಪೂರ್ಣವಾಗಿ ವ್ಯವಸಾಯವನ್ನು ನಂಬಿಕೊಂಡಿದ್ದು, ವುರುಣ ದೇವನು ಕೃಪೆ ತೋರಿ ಉತ್ತಮ ಮಳೆ ನೀಡುವಂತೆ ಮತ್ತು ಕ್ಷೇತ್ರದ ರೈತರ ಕುಟುಂಬಗಳು ನೆಮ್ಮದಿಯಿಂದ ಬಾಳುವಂತೆ ಶಿವನಲ್ಲಿ ಹಾಗೂ ವರುಣ ದೇವನಲ್ಲಿ ವಿಶೇಷವಾಗಿ ಬೇಡಿಕೊಳ್ಳಲಾಯಿತು.
ಮಳೆಯನ್ನೇ ಸಂಪೂರ್ಣವಾಗಿ ನಂಬಿ ಬಿತ್ತನೆ ಮಾಡಿರುವ ರಾಗಿ, ಸಸಿ ಹಾಗೂ ಭತ್ತ ಮುಂತಾದ ಬೆಳೆಗಳು ನೀರಿಲ್ಲದೆ ಸಂಪೂರ್ಣವಾಗಿ ಬಾಡಿಹೋಗಿವೆ. ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತರಿಗೆ ಈ ಬರಗಾಲದ ಛಾಯೆ ದೊಡ್ಡ ಕಷ್ಟವನ್ನು ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ರೈತರ ಬೆಳೆಗಳು ಕೈಗೆ ಸಿಗುವಂತಾಗಲಿ, ಜಾನುವಾರುಗಳಿಗೆ ಹಾಗೂ ಪಕ್ಷಿ-ಪ್ರಾಣಿಗಳಿಗೆ ಕುಡಿಯುವ ನೀರು ಮತ್ತು ಮೇವಿನ ಅಭಾವ ಎದುರಾಗದಿರಲಿ ಎಂದು ಪ್ರಾರ್ಥಿಸಲಾಯಿತು.
ಸಮಾಜ ಸೇವಕ ವಿ. ಮೋಹನ್ ಕೃಷ್ಣ ಅವರ ಈ ಕಾರ್ಯಕ್ಕೆ ಸ್ಥಳೀಯ ಮುಖಂಡರು ಹಾಗೂ ಗ್ರಾಮದ ರೈತಾಪಿ ವರ್ಗದ ಜನರು ಸಾಥ್ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾವು ಬೆಳಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಭಿಲಾಶ್ ರೆಡ್ಡಿ, ಶ್ರೀನಿವಾಸ ರೆಡ್ಡಿ, ಬಾಬು ರೆಡ್ಡಿ , ಗಂಗಿ ರೆಡ್ಡಿ, ಸುಧಾಕರ್ , ರಾಜಪ್ಪ, ಕೃಷ್ಣಪ್ಪ, ಶುಗರ್ ಕೃಷ್ಣಪ್ಪ, ಕಿಟ್ಟಪ್ಪ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ರೈತರು ಮುಖಂಡರು, ಅನೇಕ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.































