Home ಸುದ್ದಿ ರಾಷ್ಟ್ರೀಯ ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಮತ್ತಷ್ಟು ತೀವ್ರ

ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ಮತ್ತಷ್ಟು ತೀವ್ರ

ದುಬೈ/ರಿಯಾದ್:ಅಮೆರಿಕ ಇರಾನ್ ಸಂಘರ್ಷದ ನಡುವೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಉಲ್ಬಣಗೊಂಡಿದೆ. ಇರಾನ್ ಬೆಂಬಲಿತ ಯೆಮನ್‌ನ ಹೌಥಿ ಬಂಡುಕೋರರು ಸೌದಿ ಅರೇಬಿಯಾದ ದಕ್ಷಿಣ ಭಾಗದಲ್ಲಿರುವ ಸೇನಾ ನೆಲೆ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಘೋಷಿಸಿದ್ದಾರೆ.

ಇದೇ ವೇಳೆ, ಜಾಗತಿಕ ತೈಲ ಸಾಗಣೆಗೆ ಅತ್ಯಂತ ಮಹತ್ವದ ಹೋರ್ಮುಜ್ ಜಲಸಂಧಿ ಈಗಾಗಲೇ ನಿರ್ಬಂಧಕ್ಕೆ ಒಳಗಾಗಿರುವ ಬೆನ್ನಲ್ಲೇ, ಬಾಬ್ ಎಲ್-ಮಂದಬ್ ಜಲಸಂಧಿ ಸುತ್ತಲಿನ ಹೌಥಿಗಳ ಮುನ್ನಡೆ ಹೊಸ ಆತಂಕಕ್ಕೆ ಕಾರಣವಾಗಿದೆ.ಹೌಥಿ ಸೇನಾ ವಕ್ತಾರ ಯಾಹ್ಯಾ ಸರೀ ಅವರ ಪ್ರಕಾರ, ದಕ್ಷಿಣ ಸೌದಿಯ ಶರೂರಾ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದೆ. ತಮ್ಮ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ನಿರ್ವಹಿಸುವ ಶಸ್ತ್ರಾಸ್ತ್ರ ಸಂಗ್ರಹ ಕೇಂದ್ರಗಳು ಹಾಗೂ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೌಥಿಗಳು ಹೇಳಿದ್ದಾರೆ.

ಯೆಮನ್‌ನ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಹೌಥಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಹಿಡಿತವನ್ನು ವಿಸ್ತರಿಸಿಕೊಂಡಿದ್ದಾರೆ. ಪ್ರಮುಖ ಬಂದರು ಪಟ್ಟಣ ಮೋಖಾ ಹಾಗೂ ಬಾಬ್ ಎಲ್-ಮಂದಬ್ ಜಲಸಂಧಿಯಲ್ಲಿರುವ ಪೆರಿಮ್ ದ್ವೀಪದ ಮೇಲೆಯೂ ಹೌಥಿಗಳು ನಿಯಂತ್ರಣ ಸಾಧಿಸಿರುವುದಾಗಿ ವರದಿಯಾಗಿದೆ.


ಇದಕ್ಕೆ ಪ್ರತಿಯಾಗಿ ಸೌದಿ ಬೆಂಬಲಿತ ಯೆಮನ್ ಸರ್ಕಾರಿ ಪಡೆಗಳು ಮೋಖಾ ಸಮೀಪ ಹೌಥಿ ನೆಲೆಗಳ ಮೇಲೆ ದಾಳಿ ನಡೆಸಿವೆ. ಮೋಖಾ ಬಂದರು ಸಮೀಪ ಹೌಥಿಗಳ ವಾಹನಗಳು ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿ, ಹಲವು ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಯೆಮನ್ ಸರ್ಕಾರದ ಪಡೆಗಳು ಹೇಳಿವೆ.


ಮೋಖಾಧುಬಾಬ್ ರಸ್ತೆಯಲ್ಲಿಯೂ ಹೌಥಿ ವಾಹನಗಳು ಹಾಗೂ ಯೋಧರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.ಸೌದಿ ಅರೇಬಿಯಾ ಕಳೆದ ೪೮ ಗಂಟೆಗಳಲ್ಲಿ ಯೆಮನ್‌ನ ಹಲವು ಪ್ರಾಂತ್ಯಗಳ ಮೇಲೆ ೧೨೯ ವಾಯುದಾಳಿಗಳನ್ನು ನಡೆಸಿದೆ ಎಂದು ಹೌಥಿಗಳು ಆರೋಪಿಸಿದ್ದಾರೆ. ತಮ್ಮ ವಿರುದ್ಧದ ದಾಳಿಗಳಿಗೆ ಪ್ರತೀಕಾರ ನೀಡುವುದಾಗಿ ಹೌಥಿ ನಾಯಕತ್ವ ಎಚ್ಚರಿಸಿದೆ.


ಯೆಮನ್‌ನ ಪಶ್ಚಿಮ ಭಾಗದಲ್ಲಿ ಹೌಥಿಗಳ ಚಟುವಟಿಕೆ ಹೆಚ್ಚಿರುವುದು ಇರಾನ್‌ನ ಪ್ರಾದೇಶಿಕ ಪ್ರಭಾವ ಹಾಗೂ ಅಮೆರಿಕದ ಹಿತಾಸಕ್ತಿಗಳ ಮೇಲಿನ ಒತ್ತಡವನ್ನು ಹೆಚ್ಚಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇದರ ಮಧ್ಯೆ ಸೌದಿ ಅರೇಬಿಯಾದ ಪ್ರಮುಖ ಈಸ್ಟ್‌ವೆಸ್ಟ್ ತೈಲ ಪೈಪ್‌ಲೈನ್ ಮೇಲೂ ಹಲವು ದಾಳಿಗಳು ನಡೆದಿವೆ. ದಾಳಿಗಳ ನಂತರ ಸೌದಿ ಅರೇಬಿಯಾ ಪೈಪ್‌ಲೈನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.ಈ ಪೈಪ್‌ಲೈನ್ ಸೌದಿ ತೈಲವನ್ನು ಪರ್ಷಿಯನ್ ಕೊಲ್ಲಿಯ ಹೋರ್ಮುಜ್ ಜಲಸಂಧಿಯನ್ನು ತಪ್ಪಿಸಿ ಕೆಂಪು ಸಮುದ್ರದತ್ತ ಸಾಗಿಸಲು ನೆರವಾಗುತ್ತದೆ. ಅಲ್ಲಿಂದ ತೈಲವನ್ನು ಹಡಗುಗಳ ಮೂಲಕ ಸೂಯೆಝ್ ಕಾಲುವೆ ಮಾರ್ಗವಾಗಿ ಮೆಡಿಟರೇನಿಯನ್ ಪ್ರದೇಶಕ್ಕೆ ಸಾಗಿಸಬಹುದಾಗಿದೆ.


ಹೀಗಾಗಿ ಪೈಪ್‌ಲೈನ್ ಸ್ಥಗಿತವು ಈಗಾಗಲೇ ಹೋರ್ಮುಜ್ ಬಿಕ್ಕಟ್ಟಿನಿಂದ ಒತ್ತಡದಲ್ಲಿರುವ ಜಾಗತಿಕ ಇಂಧನ ಮಾರುಕಟ್ಟೆಗೆ ಮತ್ತೊಂದು ದೊಡ್ಡ ಹೊಡೆತವಾಗಿದೆ.
ಯೆಮನ್‌ನ ಪಶ್ಚಿಮ ಕರಾವಳಿಯಲ್ಲಿ ಹೌಥಿಗಳ ಮುನ್ನಡೆಯಿಂದ ಬಾಬ್ ಎಲ್-ಮಂದಬ್ ಜಲಸಂಧಿ ಪ್ರಮುಖ ಸಂಘರ್ಷ ವಲಯವಾಗಿ ರೂಪುಗೊಳ್ಳುವ ಆತಂಕ ಎದುರಾಗಿದೆ.ಬಾಬ್ ಎಲ್-ಮಂದಬ್ ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗ. ಜಾಗತಿಕ ಸಮುದ್ರ ಸಾಗಣೆಯ ಸುಮಾರು ಶೇ.೧೦ರಷ್ಟು ಸರಕು ಸಾಗಣೆ ಈ ಪ್ರದೇಶದ ಮೂಲಕ ನಡೆಯುತ್ತದೆ ಎಂದು ತಜ್ಞರನ್ನು ಉಲ್ಲೇಖಿಸಿ ವರದಿಯಾಗಿದೆ.

ಹೋರ್ಮುಜ್ ಜಲಸಂಧಿಯ ಜೊತೆಗೆ ಬಾಬ್ ಎಲ್-ಮಂದಬ್ ಮೇಲೂ ಅಸ್ಥಿರತೆ ಉಂಟಾದರೆ ಜಾಗತಿಕ ತೈಲ ಮತ್ತು ಸರಕು ಸಾಗಣೆ ವ್ಯವಸ್ಥೆಯ ಮೇಲೆ ದ್ವಿಗುಣ ಒತ್ತಡ ಬೀಳಬಹುದು.ಹಡಗು ಸಂಚಾರದ ಮೇಲ್ವಿಚಾರಣಾ ಮಾಹಿತಿಯ ಪ್ರಕಾರ, ಈ ಪ್ರದೇಶದಲ್ಲಿ ಸಮುದ್ರ ಮಾರ್ಗದಲ್ಲಿ ಸಾಗುವ ಬದಲು ಲಂಗರು ಹಾಕಿ ಪರಿಸ್ಥಿತಿಯನ್ನು ಗಮನಿಸುತ್ತಿರುವ ತೈಲ ಟ್ಯಾಂಕರ್‌ಗಳ ಸಂಖ್ಯೆ ಸುಮಾರು ೪೦ ಪ್ರತಿಶತ ಹೆಚ್ಚಾಗಿದೆ ಎನ್ನಲಾಗಿದೆ.


ಇನ್ನೊಂದೆಡೆ, ಅಮೆರಿಕದ ನಿರ್ಬಂಧದಿಂದ ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, ಇರಾನ್ ಬಂದರುಗಳಿಗೆ ತೆರಳಲು ಅಥವಾ ಅಲ್ಲಿಂದ ಹೊರಬರಲು ಯತ್ನಿಸಿದ ಸುಮಾರು ೧೦೦ ಹಡಗುಗಳನ್ನು ಮಾರ್ಗ ಬದಲಾಯಿಸಲಾಗಿದೆ.


ಹೋರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿದ್ದು, ಇದರ ಮೂಲಕ ಸಾಗುವ ಹಡಗು ಸಂಚಾರಕ್ಕೆ ಉಂಟಾಗಿರುವ ಅಡಚಣೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಿಸಿದೆ.ಶನಿವಾರ ಇರಾನ್‌ನ ಕ್ವೆಶ್ಮ್ ದ್ವೀಪದ ಸಮುದ್ರ ಭಾಗದಲ್ಲಿ ಎರಡು ಸ್ಫೋಟಗಳ ಸದ್ದು ಕೇಳಿಬಂದಿರುವುದಾಗಿ ಇರಾನ್ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಹೋರ್ಮುಜ್ ನಿರ್ಬಂಧ, ತೈಲ ಟ್ಯಾಂಕರ್‌ಗಳ ಮೇಲಿನ ದಾಳಿಗಳು, ಸೌದಿ ಪೈಪ್‌ಲೈನ್ ಸ್ಥಗಿತ ಹಾಗೂ ಬಾಬ್ ಎಲ್-ಮಂದಬ್ ಪ್ರದೇಶದಲ್ಲಿ ಹೌಥಿಗಳ ಮುನ್ನಡೆ?ಈ ಎಲ್ಲ ಬೆಳವಣಿಗೆಗಳು ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿವೆ.ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ ೧೦೦ ಡಾಲರ್‌ಗಿಂತ ಮೇಲೇರಿದೆ. ಇದರಿಂದ ಇಂಧನ ಬೆಲೆ ಏರಿಕೆಯ ಆತಂಕ ಜಾಗತಿಕವಾಗಿ ಹೆಚ್ಚಾಗಿದೆ.


ಅಮೆರಿಕದಲ್ಲಿಯೂ ಡೀಸೆಲ್ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಸರಾಸರಿ ಬೆಲೆ ಗ್ಯಾಲನ್‌ಗೆ ೬ ಡಾಲರ್‌ಗಿಂತ ಹೆಚ್ಚಾಗಿದ್ದು, ದಾಖಲೆಯ ಮಟ್ಟ ತಲುಪಿದೆ. ಕ್ಯಾಲಿಫೋರ್ನಿಯಾದ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಡೀಸೆಲ್ ಬೆಲೆ ಗ್ಯಾಲನ್‌ಗೆ ೯.೯೯೯ ಡಾಲರ್ವರೆಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಮಧ್ಯಪ್ರಾಚ್ಯದ ಬೆಳವಣಿಗೆಯಲ್ಲಿ ಈಗ ಪ್ರಮುಖ ಆತಂಕವೆಂದರೆ ಹೋರ್ಮುಜ್ ಮತ್ತು ಬಾಬ್ ಎಲ್-ಮಂದಬ್ ಎಂಬ ಎರಡು ಪ್ರಮುಖ ಜಲಮಾರ್ಗಗಳು ಒಂದೇ ಸಮಯದಲ್ಲಿ ಒತ್ತಡಕ್ಕೆ ಸಿಲುಕಿರುವುದು. ಹೋರ್ಮುಜ್ ಬಿಕ್ಕಟ್ಟು ಮುಂದುವರಿದಿರುವಾಗಲೇ ಹೌಥಿಗಳು ಬಾಬ್ ಎಲ್-ಮಂದಬ್ ಸುತ್ತಲಿನ ಪ್ರದೇಶದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡರೆ, ಜಾಗತಿಕ ತೈಲ ಹಾಗೂ ಸರಕು ಸಾಗಣೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.

ಇರಾನ್-ಅಮೆರಿಕ ಸಂಘರ್ಷ ಅಂತ್ಯಗೊಂಡರೂ ಹೌಥಿಗಳ ಬಿಕ್ಕಟ್ಟು ಮುಂದುವರಿದರೆ, ಮಧ್ಯಪ್ರಾಚ್ಯದಲ್ಲಿ ಸಾಮಾನ್ಯ ಹಡಗು ಸಂಚಾರ ಪುನಃಸ್ಥಾಪನೆಗೆ ಮತ್ತೊಂದು ಸವಾಲು ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ಸೌದಿ ಸೇನಾ ನೆಲೆ ಮೇಲಿನ ಹೌಥಿ ದಾಳಿ, ಯೆಮನ್‌ನಲ್ಲಿ ತೀವ್ರಗೊಂಡಿರುವ ಸಂಘರ್ಷ, ಸೌದಿ ತೈಲ ಪೈಪ್‌ಲೈನ್ ಸ್ಥಗಿತ ಮತ್ತು ಹೋರ್ಮುಜ್ ಜಲಸಂಧಿಯ ನಿರ್ಬಂಧ?ಈ ಬೆಳವಣಿಗೆಗಳು ಜಾಗತಿಕ ತೈಲ ಪೂರೈಕೆ ಸರಪಳಿಯ ಮೇಲೆ ಗಂಭೀರ ಒತ್ತಡ ತಂದಿದ್ದು, ಕಚ್ಚಾ ತೈಲ ಬೆಲೆ ಮತ್ತಷ್ಟು ಏರುವ ಸಾಧ್ಯತೆ ಬಗ್ಗೆ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.