
ಪಾವಗಡ, ಜೂ. ೬- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಅತ್ಯಂತ ಅಮೂಲ್ಯವಾಗಿದ್ದು, ತಾಲ್ಲೂಕಿನಲ್ಲಿ ೧೮ ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ನಾಗರಿಕನೂ ಕಡ್ಡಾಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮೂಲಕ ಮತದಾನದ ಹಕ್ಕು ಪಡೆಯಬೇಕು ಎಂದು ಮತದಾರರ ಪರಿಷ್ಕರಣ ಅಧಿಕಾರಿ ಎಂ. ಎಸ್. ಧರ್ಮಪಾಲ ಕರೆ ನೀಡಿದರು.
ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕಿನಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ಈಗಾಗಲೇ ತಾಲ್ಲೂಕಿನ ಎಲ್ಲಾ ಮತಗಟ್ಟೆ ಕೇಂದ್ರಗಳು ಹಾಗೂ ತಹಶೀಲ್ದಾರ್ ಕಚೇರಿಯಲ್ಲಿ ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗೆ ಇಡಲಾಗಿದೆ. ಸಾರ್ವಜನಿಕರು ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ನಿಗದಿತ ಶನಿವಾರ ಮತ್ತು ಭಾನುವಾರಗಳಂದು ತಾಲ್ಲೂಕಿನ ಎಲ್ಲ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ಆಂದೋಲನ ನಡೆಯಲಿದೆ. ಅಂದು ಆಯಾ ಮತಗಟ್ಟೆಗಳ ಬಿ.ಎಲ್.ಓ ಗಳು ಸಾರ್ವಜನಿಕರಿಗೆ ಲಭ್ಯವಿದ್ದು, ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಈ ದಿನಗಳಂದು ಕಚೇರಿಗಳಿಗೆ ಅಲೆಯದೆ ತಮ್ಮ ಮತಗಟ್ಟೆಗಳಲ್ಲೇ ಕೆಲಸ ಮುಗಿಸಿಕೊಳ್ಳಬಹುದು. ತಾಲ್ಲೂಕಿನಲ್ಲಿ ಮುಂಬರುವ ದಿನಗಳಲ್ಲಿ ಯಾವುದೇ ಲೋಪದೋಷಗಳಿಲ್ಲದ ಅತ್ಯಂತ ನಿಖರವಾದ ಮತದಾರರ ಪಟ್ಟಿಯನ್ನು ಸಡಿಪಡಿಸುವುದು ತಾಲ್ಲೂಕು ಆಡಳಿತದ ಮುಖ್ಯ ಗುರಿಯಾಗಿದೆ ಎಂದರು.
೧.೯೮.೯೯೦ ಮತದಾರರಿದ್ದು ಜೂನ್ ೩೦ ರಿಂದ ಬಿ.ಎಲ್.ಓ ಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ವೇಳೆ ಸಾರ್ವಜನಿಕರು ಅವರಿಗೆ ಸೂಕ್ತ ದಾಖಲೆ ಹಾಗೂ ಮಾಹಿತಿ ನೀಡಿ ಸಹಕರಿಸಬೇಕು ವಿಶೇಷವಾಗಿ ಗ್ರಾಮೀಣ ಭಾಗದ ನಾಗರಿಕರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಯಾವುದೇ ನಕಲಿ ಅಥವಾ ದ್ವಿಪ್ರತಿ ಮತದಾನದ ಹಕ್ಕು ಇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು
ತಹಶೀಲ್ದಾರ್ ವರದರಾಜು ಮಾತನಾಡಿ, ತಾಲ್ಲೂಕಿನ ಎಲ್ಲ ರಾಜಕೀಯ ಪಕ್ಷದ ಮುಖಂಡರುಗಳಿಗೆ ಈ ಬಗ್ಗೆ ಸಭೆಯನ್ನು ನಡೆಸಿ ಮಾಹಿತಿ ನೀಡಿದ್ದು, ಹಾಲಿ ಮತದಾರರ ಪಟ್ಟಿಯಲ್ಲಿರುವ ಮತದಾರರು ನಿಗದಿತ ಅವಧಿಯಲ್ಲಿ ಅರ್ಜಿ ಫಾರಂ ಪಡೆದುಕೊಂಡು ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಇ. ಓ. ಮಧುಸೂದನ್, ಪುರಸಭಾ ಮುಖ್ಯಾಧಿಕಾರಿ ಜಾಪರ್ ಷರೀಫ್, ಸಿಡಿಪಿಓ ಸುನಿತಾ, ಕಸಬಾ ಆರ್. ಐ. ರಾಜಿಗೋಪಾಲ್, ಗ್ರಾಮ ಆಡಳಿತಾಧಿಕಾರಿ ರಾಜೇಶ್, ತಾಲ್ಲೂಕು ಕಚೇರಿಯ ಚುನಾವಣಾ ಶಾಖೆಯ ಶಿರಸ್ತೇದಾರರು, ಉಪ ತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
































