
ಬೆಂಗಳೂರು, ಜು. ೫- ರಾಜ್ಯದಲ್ಲಿ ನಡೆದಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಯಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ಬಿಜೆಪಿ ಮತ್ತು ಜೆಡಿಎಸ್ ಮುಂದಾಗಿವೆ.
ರಾಜ್ಯದಲ್ಲಿನ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆಯುತ್ತಿದ್ದು, ನಿಯಮ ಬದ್ಧವಾಗಿ ಎಸ್‌ಐಆರ್ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಕೋರಲು ಎರಡು ಪಕ್ಷಗಳು ನಿರ್ಧರಿಸಿದ್ದು, ಅದರಂತೆ ನಾಳೆ ದೆಹಲಿಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಷಿ ಇವರುಗಳು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್ ರವರನ್ನು ಭೇಟಿ ಮಾಡಲಿದ್ದಾರೆ.
ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್‌ಕುಮಾರ್ ರವರನ್ನು ಭೇಟಿ ಮಾಡಲಿರುವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಷಿಯವರು ರಾಜ್ಯದಲ್ಲಿ ಯಾವ ರೀತಿ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ದಾಖಲೆಗಳ ಸಮೇತ ದೂರು ನೀಡಲಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ನಲ್ಲಿ ಅಕ್ರಮಗಳು ನಡೆಯುತ್ತಿರುವುದರಿಂದ, ಈ ಎಸ್‌ಐಆರ್ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಹೊಸದಾಗಿ ಎಸ್‌ಐಆರ್ ನಡೆಸುವಂತೆಯೂ ಈ ನಾಯಕರು ಕೋರಲಿದ್ದಾರೆ.
ಪ್ರತಿ ಬಿಎಲ್‌ಓಗಳು ಮನೆ ಮನೆಗೆ ಭೇಟಿ ನೀಡಿ ಎಸ್‌ಐಆರ್ ನಡೆಸಬೇಕು ಎಂಬುದು ಕಡ್ಡಾಯವಾಗಿದ್ದರೂ ಕಲ್ಯಾಣ ಮಂಟಪ, ದರ್ಗಾ, ಮಸೀದಿ, ಹಳ್ಳಿಕಟ್ಟೆ, ಕೆಲವು ನಾಯಕರುಗಳು ಮನೆಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಬಿಎಲ್‌ಓಗಳನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡು ಎಸ್‌ಐಆರ್‌ನಲ್ಲಿ ಅಕ್ರಮ ನಡೆಸುತ್ತಿದೆ ಎಂಬುದನ್ನು ಕೇಂದ್ರ ಚುನಾವಣಾ ಆಯುಕ್ತರ ಗಮನಕ್ಕೆ ತರಲಿದ್ದಾರೆ.
ಚುನಾವಣಾ ಆಯೋಗದ ನಿಯಮದಂತೆ ಮನೆ ಮನೆಗೆ ತೆರಳಿ ಮತದಾರರ ಅರ್ಜಿ ನಮೂನೆ ವಿತರಿಸಬೇಕು. ಈ ರೀತಿ ಸಾಮೂಹಿಕವಾಗಿ ಅರ್ಜಿ ನಮೂನೆ ವಿತರಿಸುವುದು ಸರಿಯಲ್ಲ. ಹಾಗಾಗಿ ಕಳೆದ ೪ ದಿನಗಳಿಂದ ರಾಜ್ಯದಲ್ಲಿ ನಡೆದಿರುವ ಎಸ್‌ಐಆರ್‌ನ್ನು ರದ್ದುಪಡಿಸಿ ಹೊಸದಾಗಿ ಎಸ್‌ಐಆರ್ ನಡೆಸಿ ಎಂದು ಇವರುಗಳು ಕೇಂದ್ರ ಚುನಾವಣಾ ಆಯುಕ್ತರಿಗೆ ಮನವಿ ಮಾಡಲಿದ್ದಾರೆ.
ರಾಜ್ಯ ಬಿಜೆಪಿ ಈಗಾಗಲೇ
ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದು, ನಾಳೆ ದೆಹಲಿಯಲ್ಲಿ ಎನ್‌ಡಿಎ ನಾಯಕರು ಕೇಂದ್ರ ಚುನಾವಣಾ ಆಯುಕ್ತರಿಗೆ ದೂರು ನೀಡುವರು.
ರಾಜ್ಯದ ರಾಮನಗರ ಯಶವಂತಪುರ ಮತ್ತಿತರರ ಕಡೆ ಎಸ್‌ಐಆರ್ ನಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸುದ್ಧಿಗೋಷ್ಠಿ ನಡೆಸಿ, ಯಾವ ರೀತಿ ಅಕ್ರಮಗಳು ನಡೆಯುತ್ತಿವೆ ಎಂಬುದನ್ನು ದಾಖಲೆಗಳ ಸಮೇತ ಮಾಹಿತಿ ನೀಡಿದ್ದರು.
ರಾಮನಗರದಲ್ಲಿ ಕಲ್ಯಾಣ ಮಂಟಪದಲ್ಲಿ ಸಾಮೂಹಿಕವಾಗಿ ಎಸ್‌ಐಆರ್ ನಡೆಯುತ್ತಿರುವ ವಿಡೀಯೋವನ್ನು ಬಿಡುಗಡೆ ಮಾಡಿದ್ದ ಅವರು ಮರುದಿನವೇ ಯಶಮಂತಪುರ ಕ್ಷೇತ್ರದಲ್ಲಿ ನಡೆದಿರುವ ಎಸ್‌ಐಅರ್ ಅಕ್ರಮ ಬಗ್ಗೆಯೂ ದಾಖಲೆಗಳನ್ನು ಬಿಡುಗಡೆ ಮಾಡಿ, ರಾಮನಗರ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಇದೆಲ್ಲದೆ ರಾಜ್ಯದ ವಿವಿಧ ಭಾಗಗಳಲ್ಲಿ ರಾಜ್ಯ ಸರ್ಕಾರ ಬಿಎಲ್ ಓ ಗಳನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಎಸ್‌ಐಆರ್ ನಡೆಸುತ್ತಿದೆ ಎಂದು ಬಿಜೆಪಿ ನಾಯಕರುಗಳು ಆರೋಪಿಸಿದ್ದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗದಗದಲ್ಲಿಯೂ ಎಸ್‌ಐಆರ್ ಅಕ್ರಮ ನಡೆದಿದೆ. ಶಾಸಕ ಎಚ್.ಕೆ. ಪಾಟೀಲ್ ಹೆಸರು ಮೂರು ಕಡೆ ಇದೆ ಎಂದು ಎಸ್‌ಐಆರ್ ಅಕ್ರಮದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.































