Home ಮುಖಪುಟ ಸುದ್ದಿ ಕೇರಳಂ ಸಿಎಂ ಆಗಿ ಸತೀಶನ್ ಪ್ರಮಾಣವಚನ

ಕೇರಳಂ ಸಿಎಂ ಆಗಿ ಸತೀಶನ್ ಪ್ರಮಾಣವಚನ

ತಿರುವನಂತಪುರಂ,ಮೇ.೧೮- ಕೇರಳದಲ್ಲಿ ಯುಡಿಎಫ್ ಮೈತ್ರಿಕೂಟದ ಹೊಸ ಸರ್ಕಾರ ಅಸ್ವಿತ್ವಕ್ಕೆ ಬಂದಿದ್ದು ಕಾಂಗ್ರೆಸ್ ನಾಯಕ ವಿಡಿ ಸತೀಶನ್ ಅವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಶಕದಿಂದ ಅಧಿಕಾರದಲ್ಲಿದ್ದ ಎಡರಂಗಗಳ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಈ ಮೂಲಕ ದಕ್ಷಿಣ ಭಾರತದ ಮತ್ತೊಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿದೆ.

ಮುಖ್ಯಮಂತ್ರಿ ವಿಡಿ ಸತೀಶ್ ಅವರ ಜೊತೆಗೆ ಕಾಂಗ್ರೆಸ್‌ನ ೧೧, ಐಯುಎಂಎಲ್‌ನ ಐವರು ಸೇರಿದಂತೆ ಮೈತ್ರಿಕೂಟದ ೨೦ ಶಾಸಕರಿಗೆ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

ತಿರುವನಂತಪುರಂನ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿರಿಯ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ, ಕೆಸಿ ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವ ಕೆ.ಎಚ್ ಮುನಿಯಪ್ಪ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಉಪ ಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ, ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವೀಂದರ್ ಸಿಂಗ್ ಸಖ್ಖು, ಸೇರಿದಂತೆ ಮೈತ್ರಿಕೂಟದ ಹಲವು ನಾಯಕರು ಈ ಕ್ಷಣಕ್ಕೆ ಸಾಕ್ಷಿಯಾದರು

ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಬಿಜೆಪಿ ರಾಜ್ಯ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಮತ್ತು ಐಯುಎಂಎಲ್ ನಾಯಕರು ಕೂಡ ಮುಖ್ಯಮಂತ್ರಿ ವಿಡಿ ಸತೀಶನ್ ಮತ್ತು ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು

ಮುಖ್ಯಮಂತ್ರಿ ವಿಡಿ ಸತೀಶನ್ ಜೊತೆಗೆ ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಸಚಿವರಾದ ರಮೇಶ್ ಚೆನ್ನಿತ್ತಲ, ಕೆ. ಮುರಳೀಧರನ್ ಮತ್ತು ಎಪಿ ಅನಿಲ್ ಕುಮಾರ್, ಕೆಪಿಸಿಸಿ ಮುಖ್ಯಸ್ಥ ಸನ್ನಿ ಜೋಸೆಫ್ ಸೇರಿದ್ದಾರೆ.

ಐಯುಎಂಎಲ್ ನಾಯಕ ಪಿ ಕೆ ಕುನ್ಹಾಲಿಕುಟ್ಟಿ, ಆರೆಸ್‌ಪಿ ನಾಯಕ ಶಿಬು ಬೇಬಿ ಜಾನ್, ಕೇರಳ ಕಾಂಗ್ರೆಸ್ ನಾಯಕ ಮಾನ್ಸ್ ಜೋಸೆಫ್ ಮತ್ತು ಕೇರಳ ಕಾಂಗ್ರೆಸ್ (ಜಾಕೋಬ್) ನಾಯಕ ಅನೂಪ್ ಜಾಕೋಬ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರೆಲ್ಲರೂ ಹಿಂದಿನ ಯುಡಿಎಫ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅನುಭವವಿದೆ

ನೂತನ ಸಚಿವ ಸಂಪುಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ’ತಲೆಮಾರುಗಳ ಬದಲಾವಣೆ’ಗೆ ಒತ್ತು ನೀಡಿದೆ. ಮುಖ್ಯಮಂತ್ರಿ ಸೇರಿ ಒಟ್ಟು ೨೧ ಸದಸ್ಯರ ಸಂಪುಟದಲ್ಲಿ ೧೪ ಮಂದಿ ಹೊಸ ಮುಖಗಳಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷವಾದ ಐಯುಎಂಎಲ್ ೫ ಸಚಿವ ಸ್ಥಾನಗಳನ್ನು ಪಡೆದುಕೊಂಡಿದ್ದು, ಕೇರಳ ಕಾಂಗ್ರೆಸ್‌ನ ವಿವಿಧ ಬಣಗಳಿಗೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಲಾಗಿದೆ.

ಖಾತೆ ಹಂಚಿಕೆ ನಿರೀಕ್ಷೆ
ಮೂಲಗಳ ಪ್ರಕಾರ, ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಹಣಕಾಸು ಮತ್ತು ಬಂದರು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರಿಗೆ ಗೃಹ ಮತ್ತು ವಿಚಕ್ಷಣಾ (ವಿಜಿಲೆನ್ಸ್) ಖಾತೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಅವರಿಗೆ ಕಂದಾಯ ಖಾತೆ ಒಲಿಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

೧೪೦ ವಿಧಾನಾಸಭೆಯ ಸಂಖ್ಯಾ ಬಲದಲ್ಲಿ ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟ ೧೦೨ ಸ್ಥಾನಗಳಲ್ಲಿ ಗೆಲುವು ಸಾಸಿದಿದೆ. ಇದರಲ್ಲಿ ಐಯುಎಂಎಲ್ ೨೨ ಸ್ಥಾನಗಳನ್ನು ಗೆದ್ದರೆ, ಎಲ್‌ಡಿಎಫ್ ೩೫ ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಬಿಜೆಪಿ ಮೂರು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು

ತಿರುವಾಂಚೂರ್ ರಾಧಾಕೃಷ್ಣನ್ ಸ್ಪೀಕರ್:

ಯುಡಿಎಫ್ ಹಿರಿಯ ಶಾಸಕ ತಿರುವಾಂಚೂರ್ ರಾಧಾಕೃಷ್ಣನ್ ಅವರನ್ನು ವಿಧಾನಸಭೆಯ ಸ್ಪೀಕರ್ ಆಗಿ ನೇಮಿಸಲು ನಿರ್ಧರಿಸಲಾಗಿದೆ.

ಉಪಸಭಾಧ್ಯಕ್ಷರಾಗಿ ಶಾನಿಮೋಲ್ ಉಸ್ಮಾನ್ ಹಾಗು ಮುಖ್ಯ ಸಚೇತಕ ಕೇರಳ ಕಾಂಗ್ರೆಸ್ (ಜೆ) ನಿಂದ ಪಕ್ಷದ ಅಧ್ಯಕ್ಷ ಪಿ ಜೆ ಜೋಸೆಫ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ

ಐಯುಎಂಎಲ್ ಐವರು ಸಚಿವರು

ಕಾಂಗ್ರೆಸ್‌ನ ಪ್ರಮುಖ ಮಿತ್ರ ಪಕ್ಷವಾದ ಐಯುಎಂಎಲ್, ವಿ ಡಿ ಸತೀಶನ್ ನೇತೃತ್ವದ ಕೇರಳ ಸಂಪುಟಕ್ಕೆ ಪಿ ಕೆ ಕುನ್ಹಾಲಿಕುಟ್ಟಿ, ಎನ್ ಶಂಸುದ್ದೀನ್, ಕೆ ಎಂ ಶಾಜಿ, ಪಿ ಕೆ ಬಶೀರ್ ಮತ್ತು ವಿ ಇ ಅಬ್ದುಲ್ ಗಫೂರ್ ಸೇರ್ಪಡೆಯಾಗಿದ್ದಾರೆ

ಕಾಂಗ್ರೆಸ್ ಸಚಿವರು

ಮುಖ್ಯಮಂತ್ರಿ ವಿಡಿ ಸತೀಶನ್ ನೇತೃತ್ವದ ಸಚಿವ ಸಂಪುಟಕ್ಕೆ ಕಾಂಗ್ರೆಸ್‌ನಿಂದ ರಮೇಶ್ ಚೆನ್ನಿತ್ತಲ, ಕೆ ಮುರಳೀಧರನ್, ಮತ್ತು ಎಪಿ ಅನಿಲ್ ಕುಮಾರ್, ಸನ್ನಿ ಜೋಸೆಫ್, ಪಿಸಿ ವಿಷ್ಣುನಾಥ್, ಟಿ ಸಿದ್ದಿಕ್, ಬಿಂದು ಕೃಷ್ಣ, ಕೆಎ ತುಳಸಿ, ರೋಜಿ ಎಂ ಜಾನ್, ಎಂ ಲಿಜು ಮತ್ತು ಒಜೆ ಜನೀಶ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಎರಡು ಅವಧಿಯ ನಂತರ ಅಧಿಕಾರಕ್ಕೆ ಬಂದಿರುವ ಯುಡಿಎಫ್ ಜನರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಲು ಬದ್ದವಾಗಿದೆ ಎಂದು ಮುಖ್ಯಮಂತ್ರಿ ವಿಡಿ ಸತೀಶನ್ ತಿಳಿಸಿದ್ದಾರೆ

ನೂತನ ಸಚಿವರು

ರಮೇಶ್ ಚೆನ್ನಿತ್ತಲ
ಪಿ ಕೆ ಕುನ್ಹಾಲಿಕುಟ್ಟಿ
ಸನ್ನಿ ಜೋಸೆಫ್
ಕೆ ಮುರಳೀಧರನ್
ಮಾನ್ಸ್ ಜೋಸೆಫ್
ಶಿಬು ಬೇಬಿ ಜಾನ್
ಅನೂಪ್ ಜೇಕಬ್
ಸಿಪಿ ಜಾನ್
ಎಪಿ ಅನಿಲ್ ಕುಮಾರ್
ಎನ್ ಸಂಸುಧೀನ್
ಪಿಸಿ ವಿಷ್ಣುನಾಥ್
ರೋಜಿ ಎಂ ಜಾನ್
ಬಿಂದು ಕೃಷ್ಣ
ಎಂ ಲಿಜು
ಕೆ ಎಂ ಶಾಜಿ
ಪಿ ಕೆ ಬಶೀರ್
ವಿ ಇ ಅಬ್ದುಲ್ ಗಫೂರ್
ಟಿ ಸಿದ್ದಿಕ್
ಕೆಎ ತುಳಸಿ
ಔಎ ಜನೀಶ್