Home ಸಿನೆಮಾ ಕಾನ್ಸ್ ಫಿಲಂ ಫೆಸ್ಟಿವಲ್ ಕಡೆ ಹೆಜ್ಜೆ ಇಟ್ಟ ‘ಸೆಪ್ಟೆಂಬರ್ 21’

ಕಾನ್ಸ್ ಫಿಲಂ ಫೆಸ್ಟಿವಲ್ ಕಡೆ ಹೆಜ್ಜೆ ಇಟ್ಟ ‘ಸೆಪ್ಟೆಂಬರ್ 21’

ಪ್ರಿಯಾಂಕ ಉಪೇಂದ್ರ ಅಭಿನಯದ ಚಿತ್ರಕ್ಕೆ ಉಪೇಂದ್ರ ಬೆಂಬಲ

ಆಲ್ಝೈಮರ್ ಖಾಯಿಲೆಯ ಸುತ್ತ ಹೆಣೆಯಲಾದ ಭಾವನಾತ್ಮಕ ಕಥಾಹಂದರ ಹೊಂದಿರುವ ‘ಸೆಪ್ಟೆಂಬರ್ 21’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರವನ್ನು 22 ವರ್ಷದ ಯುವ ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶಿಸಿದ್ದು, ಚಿತ್ರ ಮೇ 22 ರಂದು ಬಿಡುಗಡೆಯಾಗಲಿದೆ.

ಚಿತ್ರದ ಪತ್ರಿಕಾಗೋಷ್ಠಿಗೆ ಉಪೇಂದ್ರ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿರ್ದೇಶಕಿ ಕರೆನ್ ಕ್ರಿಷ್ಠಿ ಸುವರ್ಣ ಮಾತನಾಡಿ, “ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ಸಂತೋಷ. ಇನ್ನೂ ವಿಶೇಷವೆಂದರೆ, ಮೇ 15 ರಂದು ನಡೆಯುವ Cannes Film Festival ನಲ್ಲಿ ನಮ್ಮ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಆಲ್ಝೈಮರ್ ಖಾಯಿಲೆಯಿಂದ ಬಳಲುತ್ತಿರುವ ರೋಗಿ ಮತ್ತು ಅವರನ್ನು ನೋಡಿಕೊಳ್ಳುವವರ ಮನಸ್ಥಿತಿಯ ಸುತ್ತ ಕಥೆ ಸಾಗುತ್ತದೆ” ಎಂದರು.

ಅವರು ಮುಂದುವರಿದು, “ರೋಗಿಗಿಂತ ಆತನ ಆರೈಕೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರಗಳು ಎಷ್ಟು ಮಹತ್ವದ್ದಾಗಿರುತ್ತವೆ ಎಂಬುದನ್ನು ಚಿತ್ರ ಹೇಳುತ್ತದೆ. ಪ್ರಿಯಾಂಕ ಉಪೇಂದ್ರ ಅವರು ಇದುವರೆಗೆ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ” ಎಂದು ಹೇಳಿದರು.

ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, “ಕಥೆ ಹೇಳಿದ ರೀತಿ ನನಗೆ ತುಂಬಾ ಇಷ್ಟವಾಯಿತು. ನಾನು ಈವರೆಗೆ ಅಭಿನಯಿಸದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಕುಟುಂಬದಲ್ಲಿಯೂ ಆಲ್ಝೈಮರ್ ಸಮಸ್ಯೆಯನ್ನು ಹತ್ತಿರದಿಂದ ನೋಡಿರುವ ಅನುಭವ ಇದೆ. ಆ ಅನುಭವ ಈ ಪಾತ್ರಕ್ಕೆ ಸಹಾಯವಾಯಿತು” ಎಂದರು.

ಆಲ್ಝೈಮರ್ ರೋಗಿಯಿಂದ ಬಳಲುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿರುವ ಪ್ರವೀಣ್ ಸಿಂಗ್ ಸಿಸೋಡಿಯಾ, ಚಿತ್ರದ ಕಥಾಹಂದರ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಲಿದೆ ಎಂದು ಹೇಳಿದರು.

ಚಿತ್ರದ ಕಥೆಗಾರ ರಾಜಶೇಖರ್ ಕಥೆಯ ಕುರಿತು ಮಾಹಿತಿ ನೀಡಿದರೆ, ಸಂಗೀತ ನಿರ್ದೇಶಕ ವಿನಯ್ ಚಂದ್ರ ಹಾಡುಗಳ ವಿಶೇಷತೆ ಕುರಿತು ಮಾತನಾಡಿದರು. ನಿರ್ಮಾಪಕರಾದ ವಿಜಯ್ ಚೌಧರಿ, ಶ್ರೀನಿವಾಸ್ ಬೆಟ್ಟದಪುರ, ರಮೇಶ್ ಭಂಡಾರಿ ಹಾಗೂ ಅಭಿಷೇಕ್ ಗೌತಮ್, ಅಜಿತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.