
ಬೆಂಗಳೂರು, ಮೇ. ೧೮-ಮುಂಗಾರು ಮಳೆ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯ ಎಲ್ಲಾ ನಗರ ಪಾಲಿಕೆಗಳು “ವಿಪತ್ತು ನಿರ್ವಹಣೆಗೆ” ಪೂರ್ಣ ಪ್ರಮಾಣದಲ್ಲಿ ಸನ್ನದ್ಧವಾಗಿರಬೇಕು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಹಾಗೂ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ ಮಳೆಗಾಲದ ಸನ್ನದ್ಧತಾ ಪರೇಡ್ ಪರಿಶೀಲನೆ ನಡೆಸಿದ ಅವರು, ಮುಂಗಾರು ಆರಂಭಕ್ಕೂ ಮುನ್ನ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂದರು.
ಈಗಾಗಲೇ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಬಿಜಿಎಸ್ ಮೈದಾನದಲ್ಲಿ ಸಿದ್ಧತಾ ಪರೇಡ್ ನಡೆದಿದ್ದು, ದಕ್ಷಿಣ ನಗರ ಪಾಲಿಕೆಯ ಜಯನಗರ ಮತ್ತು ಪದ್ಮನಾಭನಗರ ವಿಭಾಗಗಳ ಸಂಯುಕ್ತ ಪರೇಡ್‌ನಲ್ಲೂ ಯಂತ್ರೋಪಕರಣಗಳು, ಸಿಬ್ಬಂದಿ ಹಾಗೂ ತುರ್ತು ಕಾರ್ಯಾಚರಣೆ ತಂಡಗಳ ಸಿದ್ಧತೆಯನ್ನು ಪರಿಶೀಲಿಸಲಾಯಿತು.
ಮಳೆಗಾಲದಲ್ಲಿ ರಾಜಕಾಲುವೆ ಸ್ವಚ್ಛತೆ, ಮರ ಹಾಗೂ ಕೊಂಬೆ ತೆರವು, ನೀರು ಹೊರಹಾಕುವ ಕಾರ್ಯ ಸೇರಿದಂತೆ ವಿವಿಧ ತುರ್ತು ಸೇವೆಗಳ ತಂಡಗಳು ಸಮನ್ವಯದಿಂದ ಕೆಲಸ ಮಾಡಬೇಕು. ನಾಗರಿಕರ ದೂರುಗಳಿಗೆ ಶಾಶ್ವತ ಹಾಗೂ ತಾತ್ಕಾಲಿಕ ನಿಯಂತ್ರಣ ಕೊಠಡಿಗಳು ತ್ವರಿತ ಸ್ಪಂದನೆ ನೀಡಬೇಕು ಎಂದು ಸೂಚಿಸಿದರು.
ಪರೇಡ್‌ನಲ್ಲಿ ಸಕಲ ಸಿದ್ಧತೆ ಪ್ರದರ್ಶನ
ಪರೇಡ್‌ನಲ್ಲಿ ಎಎಂಸಿ ತಂಡ, ವಿಪತ್ತು ನಿರ್ವಹಣೆ ತಂಡ, ಸಿಲ್ಟ್ ಮತ್ತು ಟ್ರ್ಯಾಕ್ಟರ್ ತಂಡ, ಗ್ಯಾಂಗ್‌ಮನ್ ಸಿಬ್ಬಂದಿ ಹಾಗೂ ವಿವಿಧ ಯಂತ್ರೋಪಕರಣಗಳ ಸನ್ನದ್ಧತೆ ಪ್ರದರ್ಶಿಸಲಾಯಿತು. ಜೆಸಿಬಿ, ಹಿಟಾಚಿ, ಪ್ರಹಾರಿ ವಾಹನ, ನೀರು ಹೊರಹಾಕುವ ಪಂಪ್‌ಗಳು, ಮರ ಕಟಾವು ಯಂತ್ರಗಳು, ಶ್ರೆಡ್ಡಿಂಗ್ ಯಂತ್ರ, ಕಸ ಗುಡಿಸುವ ಯಂತ್ರ ಸೇರಿದಂತೆ ಹಲವು ಉಪಕರಣಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಯಿತು.
ಇದೇ ವೇಳೆ ರಸ್ತೆ ಬದಿಯ ಶೋಲ್ಡರ್ ಡ್ರೇನ್ ಹಾಗೂ ಗ್ರೇಟಿಂಗ್‌ಗಳ ಬಳಿ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾನಿಗೊಂಡಿರುವ ಪಾದಚಾರಿ ಮಾರ್ಗ ಸ್ಲ್ಯಾಬ್ ಹಾಗೂ ಕರ್ಬ್‌ಸ್ಟೋನ್‌ಗಳನ್ನು ತಕ್ಷಣ ದುರಸ್ತಿ ಮಾಡುವಂತೆ ನಿರ್ದೇಶನ ನೀಡಿದರು.
ಬನ್ನೇರುಘಟ್ಟ ರಸ್ತೆ ದುರಸ್ತಿ ೧೦ ದಿನದಲ್ಲಿ ಪೂರ್ಣಗೊಳಿಸಲು ಸೂಚನೆ
ಬನ್ನೇರುಘಟ್ಟ ರಸ್ತೆ ಐಐಎಂ ಸಮೀಪ ಜಲಮಂಡಳಿ ಕೈಗೊಂಡಿರುವ ಪೈಪ್‌ಲೈನ್ ಕಾಮಗಾರಿ ವಿಳಂಬವಾಗಿರುವುದರಿಂದ ರಸ್ತೆ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದ ಮಹೇಶ್ವರ್ ರಾವ್, ಕಾಮಗಾರಿ ಪೂರ್ಣಗೊಂಡ ಭಾಗಗಳಲ್ಲಿ ಗುಣಮಟ್ಟದ ರಸ್ತೆ ಪುನರ್‌ನಿರ್ಮಾಣವನ್ನು ೧೦ ದಿನಗಳೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಚರಂಡಿಗಳಿಗೆ ಕೊಳಚೆ ನೀರು ಹರಿಯದಂತೆ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ತೆರೆದಿರುವ ಪಾದಚಾರಿ ಮಾರ್ಗ ಸ್ಲ್ಯಾಬ್‌ಗಳನ್ನು ತಕ್ಷಣ ಸರಿಪಡಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಜಲಮಂಡಳಿ ಕಾಮಗಾರಿ ಪೂರ್ಣಗೊಂಡ ನಂತರ ಪಾಲಿಕೆ ವತಿಯಿಂದ ಡಾಂಬರೀಕರಣ ಹಾಗೂ ಪಾದಚಾರಿ ಮಾರ್ಗ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಲಾಯಿತು.
ಪರಿಶೀಲನಾ ವೇಳೆ ಸತೀಶ್ ರೆಡ್ಡಿ, ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಅಪರ ಆಯುಕ್ತ ನವೀನ್ ಕುಮಾರ್ ರಾಜು, ಮುಖ್ಯ ಅಭಿಯಂತರರಾದ ರವಿ ಹಾಗೂ ಬವರಾಜ್ ಕಬಾಡೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.





















