
ತಿಪಟೂರು, ಆ. ೨೯- ಇತ್ತೀಚೆಗೆ ನಿಧನರಾದ ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ ಅವರ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಆರ್‌ಎಸ್‌ಎಸ್ ಕಟ್ಟಾಳು ಆಗಿದ್ದ ಮಾಜಿ ಸಚಿವ ಬಿ.ಸಿ. ನಾಗೇಶ್ ರವರೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಬಿ.ಎಲ್. ಸಂತೋಷ್ ಅವರು ಇಂದು ಬೆಳಿಗ್ಗೆ ೧೦.೩೦ರಲ್ಲಿ ತಿಪಟೂರಿಗೆ ಭೇಟಿ ನೀಡಿ ನಾಗೇಶ್ ರವರ ಕುಟುಂಬಸ್ಥರೊಂದಿಗೆ ಕೆಲ ಕಾಲ ಚರ್ಚಿಸಿ ಸಂತೈಸಿದರು.
ಕಳೆದ ಸುಮಾರು ೪೦ ವರ್ಷಗಳಿಂದ ತಮ್ಮ ಮತ್ತು ನಾಗೇಶ್ ರವರೊಂದಿಗೆ ಇದ್ದ ಒಡನಾಟದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಂತೋಷ್ ಅವರು, ನಾಗೇಶ್ ರವರ ನಿಧನ ಬಿಜೆಪಿ ಪಕ್ಷಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ನಾಗೇಶ್ ಅವರು ಶಿಕ್ಷಣ ಸಚಿವರಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹಾಗೆಯೇ ತಿಪಟೂರು ಕ್ಷೇತ್ರದ ಅಭಿವೃದ್ಧಿಗೂ ಶ್ರಮಿಸಿದ್ದಾರೆ ಎಂದರು.
ಸುಮಾರು ಒಂದೂವರೆ ಗಂಟೆಕಾಲ ಬಿ.ಎಲ್. ಸಂತೋಷ್ ಅವರು ಬಿ.ಸಿ. ನಾಗೇಶ್ ರವರ ಪುತ್ರ ವಿಶ್ವದೀಪು ನಾಗೇಶ್ ಹಾಗೂ ನಾಗೇಶ್ ರವರ ಪತ್ನಿ ರವರೊಂದಿಗೆ ಚರ್ಚೆ ನಡೆಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತೀಶ್ ದೊಡ್ಡಮಾರ್ಪನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.


































