Home ಜಿಲ್ಲೆ ತುಮಕೂರು ಎಸ್‌ಐಆರ್ ಪ್ರಕ್ರಿಯೆಗೆ ಅಲೆಮಾರಿಗಳ ಒಳಪಡಿಸಲು ಮನವಿ

ಎಸ್‌ಐಆರ್ ಪ್ರಕ್ರಿಯೆಗೆ ಅಲೆಮಾರಿಗಳ ಒಳಪಡಿಸಲು ಮನವಿ

ಚಿಕ್ಕನಾಯಕನಹಳ್ಳಿ, ಜು. ೯- ಮುಂಜಾನೆ ಕೆಲಸಕ್ಕೆ ಹೋಗಿ ಸಂಜೆ ಬರುವ ಅಲೆಮಾರಿಗಳು ದೇಶಾದ್ಯಂತ ನಡೆಯುತ್ತಿರುವ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹೊರಗುಳಿಯಬಾರದು, ಎಸ್‌ಐಆರ್ ಬಗ್ಗೆ ಮಾಹಿತಿ ಇಲ್ಲದ ಅಲೆಮಾರಿಗಳಿಗೆ ಅಧಿಕಾರಿಗಳು ತಿಳಿ ಹೇಳಿ ಅವರ ಸಮಯ ಕಾಯ್ದಿರಿಸಿ ಅಲೆಮಾರಿಗಳೆಲ್ಲರನ್ನೂ ಎಸ್‌ಐಆರ್ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಂಗದಹಳ್ಳಿ ರಾಜ್‌ಕುಮಾರ್ ಹೇಳಿದರು.


ಪಟ್ಟಣದ ಮಾರುತಿ ನಗರದಲ್ಲಿ ಅಲೆಮಾರಿಗಳು, ದೊಂಬಿದಾಸರು, ಚನ್ನದಾಸರು, ದಕ್ಕಲಿಗರು ವಾಸವಿರುವ ಸ್ಥಳಕ್ಕೆ ಭೇಟಿ ನೀಡಿ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿದರು. ಮತಾದನದಿಂದ ಹೊರಗುಳಿದರೆ ಆಗುವ ತೊಂದರೆಗಳು, ಮತದಾನ ಎಷ್ಟು ಮುಖ್ಯ ಎಂಬುದರ ಬಗ್ಗೆ ಅಲೆಮಾರಿಗಳ ಬಳಿ ತೆರಳಿ ಸ್ಥಳದಲ್ಲೇ ಕೂತು ಕೂಲಂಕುಶವಾಗಿ ಎಸ್‌ಐಆರ್ ಬಗ್ಗೆ ತಿಳಿಸಿದರು.


ಅಲೆಮಾರಿಗಳು ಮುಂಜಾನೆಯೇ ಕೆಲಸಕ್ಕೆಂದು ಊರುರು ಅಲೆಯುತ್ತಾರೆ ಹಾಗಾಗಿ ಮುಂಜಾನೇ ೭ ಗಂಟೆಗೆ ಅವರಿರುವ ಸ್ಥಳಕ್ಕೆ ಆಗಮಿಸಿದರೆ ಪ್ರತಿಯೊಬ್ಬರೂ ಸಿಗುತ್ತಾರೆಂದು ಅಲೆಮಾರಿಗಳ ವಸತಿ ಸ್ಥಳಕ್ಕೆ ಆಗಮಿಸಿದ್ದೆಂದು ತಿಳಿಸಿದ ಅವರು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು ೨ ಲಕ್ಷದ ೨೦ ಸಾವಿರದ ೬೨೫ ಮತದಾರರಿದ್ದು ಅವರಲ್ಲಿ ೨,೧೫,೬೯೧ ಮತಗಳು ಮ್ಯಾಪಿಂಗ್ ಆಗಿದ್ದು ೪೯೩೪ ಮತಗಳು ಮ್ಯಾಪಿಂಗ್ ಆಗಿರುವುದಿಲ್ಲ ಹಾಗಾಗಿ ಬಿಎಲ್‌ಓಗಳು ಪ್ರತಿ ನಾಗರೀಕರು ಮತದಾನದ ಪ್ರಕ್ರಿಯೆಯಲ್ಲಿ ತೊಡಗುವಂತೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.


ಅಲೆಮಾರಿಗಳೆಲ್ಲರೂ ಮತದಾರರ ಪಟ್ಟಿಗೆ ಸೇರಬೇಕು, ಅವರಿಗೆ ರೇಷನ್ ಕಾರ್ಡ್, ವಿದ್ಯಾರ್ಥಿ ವೇತನ ದೊರಕಬೇಕು. ಮತದಾನದಿಂದ ಇಂತಹ ಎಲ್ಲ ಸೌಲಭ್ಯಗಳು ದೊರೆಯುತ್ತವೆ ಎಂದ ಅವರು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಬಿಎಲ್‌ಓಗಳು ಎಸ್‌ಐಆರ್ ಬಗ್ಗೆ ಅಲೆಮಾರಿಗಳಿಗೆ ತಿಳಿಸಿ ಅವರ ಸಮಯವನ್ನು ನೋಡಿಕೊಂಡು ಎಲ್ಲರನ್ನೂ ಮತದಾರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಕೆಲಸ ನಿರ್ವಹಿಸಬೇಕು ಎಂದರು.


ಈ ಸಂದರ್ಭದಲ್ಲಿ ಅಲೆಮಾರಿ ಸಮುದಾಯದ ಮುಖಂಡರುಗಳಾದ ರಂಗನಾಥ್, ಶಾಂತರಾಜು, ರಾಮಾಂಜಿ ಮತ್ತಿತರರು ಉಪಸ್ಥಿತರಿದ್ದರು.