Home ಜಿಲ್ಲೆ ಬೆಂಗಳೂರು ಬರಪೀಡಿತ ಶಿಡ್ಲಘಟ್ಟ ಘೋಷಣೆಗೆ ಡಿಸಿಎಂಗೆ ರಾಜೀವ್ ಗೌಡ ಮನವಿ

ಬರಪೀಡಿತ ಶಿಡ್ಲಘಟ್ಟ ಘೋಷಣೆಗೆ ಡಿಸಿಎಂಗೆ ರಾಜೀವ್ ಗೌಡ ಮನವಿ

ಶಿಡ್ಲಘಟ್ಟ,ಜು೨೩:ಚಿಕ್ಕಬಳ್ಳಾಪುರ ಜಿಲ್ಲೆಯ ಗಿಡ್ನಹಳ್ಳಿ ಗ್ರಾಮಕ್ಕೆ ಬರ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಭೇಟಿ ಮಾಡಿ ಕ್ಷೇತ್ರದ ರೈತರ ಸಂಕಷ್ಟವನ್ನು ವಿವರಿಸಿದರು.


ಮಳೆ ಕೊರತೆಯಿಂದ ಶಿಡ್ಲಘಟ್ಟ ಸೇರಿದಂತೆ ಜಿಲ್ಲೆಯಾದ್ಯಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಹೊಲಗಳನ್ನು ಉಳುಮೆ ಮಾಡಿ ಮಳೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರುವುದರ ಮೂಲಕ ಶಿಡ್ಲಘಟ್ಟ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ತುರ್ತು ಪರಿಹಾರ ಹಾಗೂ ಅಗತ್ಯ ನೆರವು ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜೀವ್ ಗೌಡ ಮನವಿ ಮಾಡಿ ಬರದ ತೀವ್ರತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅನ್ನದಾತರ ನೆರವಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದರು.


ಸಂದರ್ಭದಲ್ಲಿ ಮಾತನಾಡಿದ ರಾಜೀವ್ ಗೌಡರು ಕೆಐಎಡಿಬಿಗೆ ಸಂಭಂದಿಸಿದಂತೆ ರೈತರ ಹಿತಾಸಕ್ತಿ ವಿಚಾರವಾಗಿ ಜನರನ್ನು ಗೊಂದಲಕ್ಕೀಡು ಮಾಡುವ ಹೇಳಿಕೆಗಳನ್ನು ಜನಪ್ರತಿನಿಧಿಗಳು ನೀಡಬಾರದು ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನನ್ನ ಜವಾಬ್ದಾರಿ.ರೈತರ ಪರವಾಗಿ ನಾನು ಯಾವತ್ತೂ ನಿಲ್ಲುತ್ತೇನೆ. ಅಭಿವೃದ್ಧಿಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವ ವಿಚಾರವನ್ನು ಸರ್ಕಾರ ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಬೇಕು. ಅಭಿವೃದ್ಧಿಯೂ ಆಗಬೇಕು, ರೈತರ ಬದುಕೂ ಉಳಿಯಬೇಕು ಎಂದು ಹೇಳಿದರು.


ಇತ್ತೀಚೆಗೆ ಶಾಸಕರು ಮಾಧ್ಯಮಗಳ ಮುಂದೆ ರೈತರ ಪರವಾಗಿ ನಿಲ್ಲುತ್ತೇನೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದರು. ನಂತರ ತಾವು ಹಾಗೆ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿರುವುದು ಸರಿಇಲ್ಲ ಜನರ ಪರವಾಗಿ ಮಾತನಾಡುವವರು ತಮ್ಮ ಮಾತಿಗೆ ಬದ್ಧರಾಗಬೇಕು. ರೈತರ ಬದುಕಿನ ಪ್ರಶ್ನೆಯಲ್ಲಿ ಗೊಂದಲಕ್ಕೆ ಅವಕಾಶ ಇರಬಾರದು ಎಂದು ಶಾಸಕರಿಗೆ ಪರೋಕ್ಷವಾಗಿ ಹೇಳಿದರು.


ಚಿಕ್ಕಬಳ್ಳಾಪುರ ಜಿಲ್ಲೆ ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ಹಾನಿಯಾದ ಪ್ರದೇಶಗಳ ಸಮೀಕ್ಷೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ವರದಿ ಸಿದ್ಧಪಡಿಸಿ, ಅರ್ಹ ರೈತರಿಗೆ ತಕ್ಷಣ ಬರ ಪರಿಹಾರ ಹಾಗೂ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.


ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬಂಧನ ಖಂಡನೀಯ. ಜಿಲ್ಲಾ ಯುವ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಿ ವಿದ್ಯಾರ್ಥಿಗಳ ಪರವಾಗಿ ನಮ್ಮ ಬೆಂಬಲ ವ್ಯಕ್ತಪಡಿಸಿದ್ದೇವೆ ಹಾಗೇ ನೀಟ್ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅವ್ಯವಸ್ಥೆಯನ್ನು ಖಂಡಿಸುತ್ತೇವೆ ಎಂದರು.


ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಜಿಲ್ಲಾಧಿಕಾರಿ ಜಿ.ಪ್ರಭು ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಜಿಲ್ಲಾಡಳಿತ ಅಧಿಕಾರಿಗಳು ಹಾಜರಿದ್ದರು.