Home ಜಿಲ್ಲೆ ಕಲಬುರಗಿ 20 ಸಾವಿರ ಮಧ್ಯಂತರ ಪರಿಹಾರ ನೀಡಿ

20 ಸಾವಿರ ಮಧ್ಯಂತರ ಪರಿಹಾರ ನೀಡಿ

ಕಲಬುರಗಿ: ಮುಂಗಾರು ಮಳೆ ಕೈಕೊಟ್ಟು ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ 2,500 ಇನ್‍ಪುಟ್ ಸಬ್ಸಿಡಿ ಪರಿಹಾರ ಸಾಲದು ಎಂದು ಜಿಲ್ಲಾ ಬಿಜೆಪಿ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಸುಂದರ ಡಿ ಸಾಗರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿ, ದುಬಾರಿ ದಿನಗಳಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಸರ್ಕಾರ ಕನಿಷ್ಠ 15ರಿಂದ 20 ಸಾವಿರ ಮಧ್ಯಂತರ ಪರಿಹಾರ ನೀಡಬೇಕಿತ್ತು. ಆದರೆ, ಕೇವಲ 2,500 ನೀಡಿರುವುದು ರೈತರ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಅವರು ಟೀಕಿಸಿದ್ದಾರೆ.ಒಂದು ಚೀಲ ಡಿಎಪಿ ಗೊಬ್ಬರಕ್ಕೆ 2 ಸಾವಿರದಿಂದ 3 ಸಾವಿರದ ವರೆಗೆ ಖರ್ಚಾಗುತ್ತಿದೆ. ಬೀಜ, ಗೊಬ್ಬರ, ಡೀಸೆಲ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಒಂದು ಎಕರೆ ಬಿತ್ತನೆ ಮಾಡಿ ಬೆಳೆ ತೆಗೆಯಲು ಕನಿಷ್ಠ 25ರಿಂದ 30 ಸಾವಿರ ವೆಚ್ಚವಾಗುತ್ತದೆ. ಇಂತಹ ಸಂದರ್ಭದಲ್ಲಿ 2,500 ಪರಿಹಾರದಿಂದ ರೈತರ ಸಂಕಷ್ಟ ನಿವಾರಣೆಯಾಗುವುದಿಲ್ಲ ಎಂದಿದ್ದಾರೆ.ರೈತರ ಪರ ಎಂದು ಹೇಳಿಕೊಳ್ಳುವ ಜನ ಪ್ರತಿನಿಧಿಗಳು ವಾಸ್ತವ ಸಮಸ್ಯೆಗಳಿಗೆ ಸ್ಪಂದಿಸಬೇಕು.ತಾತ್ಕಾಲಿಕ ಬರ ಪರಿಹಾರದ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರಬಾರದು.ಹಿಂಗಾರು ಹಂಗಾಮಿಗೆ ಅಗತ್ಯವಿರುವ ಬೀಜ,ಗೊಬ್ಬರ ಹಾಗೂ ಬಿತ್ತನೆ ಸಲಕರಣೆಗಳನ್ನು ಉಚಿತವಾಗಿ ಒದಗಿಸಿ, ರೈತರ ಆತ್ಮಸ್ಥೆರ್ಯ ಹೆಚ್ಚಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.