
ತಿಪಟೂರು, ಸೆ. ೧೩- ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳು ಹಾಗೂ ತೋಟದ ಮನೆಗಳಿಗೆ ರಾತ್ರಿ ವೇಳೆಯಲ್ಲಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಿದ್ಯುತ್ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮಳೆ ಕೊರತೆ ಹಾಗೂ ಬರದ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತಷ್ಟು ಹೊರೆ ತಂದಿದೆ. ಪಂಪ್‌ಸೆಟ್‌ಗಳಿಗೆ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ಬೆಳೆಗಳು ಒಣಗುವ ಆತಂಕ ಎದುರಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ನೀಡದಿರುವುದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಜಾನುವಾರುಗಳಿಗೆ ಅಗತ್ಯವಿರುವ ಕುಡಿಯುವ ನೀರು ಹಾಗೂ ಮೇವು ಬೆಳೆಸುವುದಕ್ಕೂ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.
ರಾತ್ರಿ ವೇಳೆಯಲ್ಲಿ ಸಿಂಗಲ್‌ಫೇಸ್ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದಿರುವುದರಿಂದ ತೋಟದ ಮನೆಗಳಲ್ಲಿ ವಾಸಿಸುವ ರೈತರು ಹಾಗೂ ಕುಟುಂಬಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ತೋಟದ ಮನೆಗಳಲ್ಲಿರುವ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿರುವ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್ ಪೂರೈಕೆಯಲ್ಲಿಯೂ ಆಗಾಗ್ಗೆ ವ್ಯತ್ಯಯ ಉಂಟಾಗುತ್ತಿದೆ. ವಿದ್ಯುತ್ ಕಡಿತದಿಂದ ಕುಡಿಯುವ ನೀರಿನ ಪಂಪ್‌ಗಳನ್ನು ಕಾರ್ಯನಿರ್ವಹಿಸಲು ಸಾಧ್ಯವಾಗದೆ ಗ್ರಾಮಸ್ಥರು ಪರದಾಡುವಂತಾಗಿದೆ. ವಿದ್ಯಾರ್ಥಿಗಳು ರಾತ್ರಿ ವೇಳೆಯಲ್ಲಿ ವಿದ್ಯಾಭ್ಯಾಸಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಮುಖಂಡ ಮಡೇನೂರು ವಿನಯ್‌ಕುಮಾರ್ ಮಾತನಾಡಿ, ಸರ್ಕಾರ ಹಾಗೂ ಬೆಸ್ಕಾಂ ಇಲಾಖೆ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಅನಗತ್ಯ ಲೋಡ್‌ಶೆಡ್ಡಿಂಗ್‌ನಿಂದ ರೈತರ ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿವೆ. ಜಾನುವಾರುಗಳಿಗೆ ಮೇವು ಬೆಳೆಸುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಪ್ರತಿಭಟನೆ ನಡೆಸಿದಾಗ ಕೆಲ ದಿನಗಳ ಕಾಲ ಸಮರ್ಪಕ ವಿದ್ಯುತ್ ನೀಡಲಾಗುತ್ತದೆ. ಆದರೆ ನಂತರ ಮತ್ತೆ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗುತ್ತದೆ ಎಂದು ಆರೋಪಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ತೋಟದ ಮನೆಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ರಾತ್ರಿ ವೇಳೆಯಲ್ಲಿಯೂ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ಸಮಸ್ಯೆ ತಕ್ಷಣ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಬೆಸ್ಕಾಂ ಕಚೇರಿಗೆ ಬೀಗ ಜಡಿದು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.
ಕೃಷಿಕ ಸಮಾಜದ ನಿರ್ಧೇಶಕ ವಿಶ್ವನಾಥ್ ಆಲದಹಳ್ಳಿ ಮಾತನಾಡಿ, ಬರಗಾಲದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿ ಅತ್ಯಗತ್ಯವಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ರೈತರು ಮಾಡಿದ ಸಂಪೂರ್ಣ ಹೂಡಿಕೆ ನಷ್ಟವಾಗುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ರೈತರ ಸಮಸ್ಯೆಯನ್ನು ಕೇವಲ ತಾತ್ಕಾಲಿಕವಾಗಿ ಪರಿಹರಿಸದೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬೆಸ್ಕಾಂ ಎಇ ಸೋಮಶೇಖರ್ ಗೌಡ ಮಾತನಾಡಿ, ಇಲಾಖೆಯಲ್ಲಿ ಉಂಟಾದ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕಳೆದ ಕೆಲವು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಸಮಸ್ಯೆಯನ್ನು ಪರಿಶೀಲಿಸಲಾಗಿದ್ದು, ಎರಡು-ಮೂರು ದಿನಗಳಲ್ಲಿ ಅಗತ್ಯ ಕ್ರಮ ಕೈಗೊಂಡು ವಿದ್ಯುತ್ ಪೂರೈಕೆಯನ್ನು ಸುಧಾರಿಸಲಾಗುವುದು ಎಂಬ ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು. ಆದರೆ ನೀಡಿರುವ ಭರವಸೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಮೇನಹಳ್ಳಿ ಚೇತನ್, ರಂಗಾಪುರಲೊಕೇಶ, ಹೊನ್ನವಳ್ಳಿ ಶ್ರೀಕಂಠಮೂರ್ತಿ, ಪರವಗೊಂಡನಹಳ್ಳಿ ರೇಣುಕಮೂರ್ತಿ, ಕುಮಾರ್, ಬಿಜೆಪಿ ಪರಿಶಿಷ್ಟ ವರ್ಗದ ಜಿಲ್ಲಾಧ್ಯಕ್ಷ ದಿಲೀಪ್‌ಸೂಗೂರು, ಕಾಂತರಾಜು, ರಾಜಶೇಖರ್, ಪ್ರತಾಪ್, ಮಧು, ವಿಜಯ್‌ಕುಮಾರ್, ನಾಗರಾಜು, ರವೀಶ್ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.


































