
ಕಲಬುರಗಿ:ಜು.3: ಕನ್ನಡ ಹರಿದಾಸ ಸಾಹಿತ್ಯದ ಹರಿಕಾರರಾದ ಶ್ರೀಪಾದರಾಜರ ಆರಾಧನಾ ದಿನವನ್ನು ದಾಸ ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠಾನ ‘ದಾಸ ಸಾಹಿತ್ಯ ದಿನ’ ವನ್ನಾಗಿ ಈಚೆಗೆ ಇಲ್ಲಿ ವೈಭವದಿಂದ ಆಚರಿಸಿತು.
ಇಲ್ಲಿಯ ಕರುಣೇಶ್ವರ ನಗರದ ಜೈವೀರ ಹನುಮಾನ್ ಮಂದಿರದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರತಿಷ್ಠಾನವು ಇದೇ ಮೊದಲ ಬಾರಿಗೆ ಪ್ರತಿಷ್ಠಾಪಿಸಿರುವ ರಾಜ್ಯ ಮಟ್ಠದ ‘ಹರಿದಾಸ ಸಂಪದ’ ಪ್ರಶಸ್ತಿಯನ್ನು ನಾಡಿನ ಸುವಿಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರೂ, ನಿವೃತ್ತ ಐ.ಎ.ಎಸ್. ಅಧಿಕಾರಿಗಳೂ ಆದ ಡಾ.ಮುದ್ದುಮೋಹನ ಅವರಿಗೆ ಅವರು ಶಾಸ್ತ್ರೀಯ ಸಂಗೀತಕ್ಕೆ ಮತ್ತು ದಾಸರ ಹಾಡುಗಳಿಗೆ ಧ್ವನಿಯಾಗಿ ದಾಸ ಸಾಹಿತ್ಯಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಪ್ರದಾನ ಮಾಡಲಾಯಿತು. ಹನ್ನೊಂದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಪ್ರಶಸ್ತಿ ಒಳಗೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಡಾ.ಮುದ್ದುಮೋಹನ ಅವರು ಶಾಸ್ತ್ರೀಯ ಸಂಗೀತ ಹಾಗೂ ದಾಸವಾಣಿಯನ್ನು ತಮ್ಮ ಸುಶ್ರಾವ್ಯ ಕಂಠದಲ್ಲಿ ನಡೆಸಿಕೊಟ್ಟು ಸಂಗೀತ ಮತ್ತು ದಾಸಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
ನೂಪುರ ನೃತ್ಯ ಸಂಗೀತ ಸಂಸ್ಥೆಯ ಸೌಖ್ಯಾ ಪ್ರವೀಣ ಕುಲಕರ್ಣಿ ತಂಡದ ಯುವ ಕಲಾವಿದೆಯರು ಶ್ರೀಪಾದರಾಜರ ಕೀರ್ತನೆಗಳ ನೃತ್ಯ ರೂಪಕಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಮುದ್ದುಮೋಹನ ಅವರು ದಾಸ ಸಾಹಿತ್ಯ, ಸಂಸ್ಕೃತಿ ಪ್ರಸಾರಕ್ಕೆ ಕಂಕಣಬದ್ಧವಾಗಿ ಸೇವೆ ಸಲ್ಲಿಸುತ್ತರುವ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ತಮಗೆ ನೀಡಿರುವ ‘ ಹರಿದಾಸ ಸಂಪದ’ ಪ್ರಶಸ್ತಿ ತಾವು ಪಡೆದಿರುವ ಪ್ರಶಸ್ತಿಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ವ ಹಿಂದು ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಅಧ್ಯಕ್ಷರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ ಬಸವರಾಜಪ್ಪ ಅಪ್ಪಾ ಅವರು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಹರಿದಾಸರ ಮತ್ತು ಶರಣರ ತತ್ವಾದರ್ಶಗಳು ಎಂದಿಗೂ ಪ್ರಸ್ತುತವಾಗಿ ಉಳಿದುಕೊಂಡಿವೆ ಎಂದು ತಿಳಿಸಿದರು.
ಪ್ರತಿಷ್ಠಾನದ ಉಪಾಧ್ಯಕ್ಷರಾದ ನಿವೃತ್ತ ಇಂಜಿನಿಯರಿಂಗ್ ಪ್ರಾಧ್ಯಾಪಕ ವ್ಯಾಸರಾಜ ಸಂತೆಕೆಲ್ಲೂರ ಅವರು ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಕುರಿತು ಮಾತನಾಡಿ ಭಕ್ತಿ ಪರಂಪರೆಯ ಸಾಹಿತ್ಯ ಮತ್ತು ಪೌರಾಣಿಕ ಸಾಹಿತ್ಯ ಸಂಸ್ಕೃತಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಕಟ್ಟಿಕೊಡುವ ದಿಟ್ಟ ನಿರ್ಧಾರವನ್ನು ಕೈಕೊಂಡು ಒಂದು ಕ್ರಾಂತಿಯನ್ನೇ ಉಂಟು ಮಾಡಿದರು. ಈ ಮೂಲಕ ಶ್ರೀಪಾದರಾಜರು ಭವಿಷ್ಯದ ದಾಸ ಸಾಹಿತ್ಯದ ಸಮೃದ್ಧ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದರೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀನಿವಾಸ ಸಿರನೂರಕರ್ ಅವರು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಶ್ರೀಪಾದರಾಜರ ಆರಾಧನಾ ದಿನವನ್ನು ಪ್ರತಿ ವರ್ಷ ದಾಸ ಸಾಹಿತ್ಯ ದಿನವನ್ನಾಗಿ ಆಚರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು. ಈ ದಿನವನ್ನು ಆಚರಿಸುವಂತೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು. ನಾಡಿನ ಪ್ರಖ್ಯಾತ ವಿದ್ವಾಂಸರಾದ ಪೆÇ್ರ. ಎ.ವಿ.ನಾವಡ, ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹಾಗು ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಕಾರ್ಯಕ್ರಮಕ್ಕೆ ಶುಭ ಕೋರಿ ಕಳುಹಿಸಿದ ಸಂದೇಶವನ್ನು ಓದಿದರು.ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಪ್ರತಿಷ್ಠಾನದ ಖಜಾಂಚಿ ಕೆ.ಪಿ.ಗಿರಿಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಕುಲಕರ್ಣಿ, ಜೈವೀರ ಹನುಮಾನ್ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅವಿನಾಶ ಕುಲಕರ್ಣಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಡಾ.ಸುನಂದಾ ಸಾಲವಾಡಗಿ ಕಾರ್ಯಕ್ರಮ ನಿರೂಪಿಸಿದರು. ಕೆ.ಪಿ.ಗಿರಿಧರ ವಂದಿಸಿದರು.
ಭಾರತದ ಸುವಿಖ್ಯಾತ ಸ್ಥಪತಿ ಮಾನಯ್ಯ ಬಡಿಗೇರ, ಶಿಕ್ಷಣ ತಜ್ಞ ಡಾ.ಪ್ರಹ್ಲಾದ ಭುರ್ಲಿ, ನಾಡಿನ ಸುವಿಖ್ಯಾತ ನೃತ್ಯ ವಿದುಷಿ ಶುಭಾಂಗಿ ಸುಧೀಂದ್ರ,ಖ್ಯಾತ ಕಥೆಗಾರ್ತಿ ಸಂಧ್ಯಾ ಹೊನಗುಂಟೀಕರ್,ಸಂಗೀತ ಕಲಾವಿದರಾದ ರಮೇಶ ಕುಲಕರ್ಣಿ, ಮಹೇಶ ಬಡಿಗೇರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




























