
ಬೆಂಗಳೂರು, ಅ.೧೩- ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಗೊಟ್ಟಿಗೆರೆಯಿಂದ ತಾವರೆಕೆರೆವರೆಗಿನ ಜಂಕ್ಷನ್‌ಗಳ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಸುಮಾರು ೩.೨ ಕಿ.ಮೀ ಉದ್ದದ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದ ಅವರು, ಸಾರ್ವಜನಿಕರ ಸುರಕ್ಷಿತ ಸಂಚಾರಕ್ಕೆ ಎದುರಾಗುತ್ತಿರುವ ಅಡಚಣೆಗಳನ್ನು ಆದ್ಯತೆಯ ಮೇರೆಗೆ ನಿವಾರಿಸುವಂತೆ ನಿರ್ದೇಶನ ನೀಡಿದರು.
ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಸಮೀಪದ ಬಸ್ ನಿಲ್ದಾಣಕ್ಕೆ ಕೇವಲ ೫೦ ಮೀಟರ್ ಅಂತರವಿದ್ದರೂ, ಪಾದಚಾರಿಗಳು ಸುರಕ್ಷಿತವಾಗಿ ತೆರಳಲು ಸೂಕ್ತ ಮಾರ್ಗವಿಲ್ಲದಿರುವುದನ್ನು ಮುಖ್ಯ ಆಯುಕ್ತರು ಗಮನಿಸಿದರು. ಈ ಸ್ಥಳದಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೆಟ್ರೋ ನಿಲ್ದಾಣದ ಸಮೀಪವೇ ಬನ್ನೇರುಘಟ್ಟ ರಸ್ತೆಯನ್ನು ದಾಟುವುದು ಅಪಾಯಕಾರಿಯಾಗಿದ್ದು, ಸ್ಥಳದ ಪರಿಸ್ಥಿತಿಗೆ ಅನುಗುಣವಾಗಿ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ರೂಪಿಸುವಂತೆ ತಿಳಿಸಿದರು. ಸುಮಾರು ೧೦.೫ ಮೀಟರ್ ಕ್ಯಾರೇಜ್‌ವೇ ಹೊಂದಿರುವ ಈ ರಸ್ತೆಯಲ್ಲಿ ಪಾದಚಾರಿ ಮಾರ್ಗಗಳ ಕೊರತೆಯನ್ನು ನಿವಾರಿಸಲು ಲಭ್ಯವಿರುವ ಸ್ಥಳಾವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾದಚಾರಿ ಮಾರ್ಗಗಳಲ್ಲಿ ಹಾಗೂ ತೆರೆದ ಚರಂಡಿಗಳ ಬಳಿ ಅಳವಡಿಸಿರುವ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ಚೇಂಬರ್‌ಗಳು ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕೇಬಲ್ ಆಪರೇಟರ್‌ಗಳೊಂದಿಗೆ ಸಮನ್ವಯ ಸಾಧಿಸಿ, ಚೇಂಬರ್‌ಗಳು ಮತ್ತು ಕೇಬಲ್‌ಗಳನ್ನು ಸೂಕ್ತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದರು.
ಚರಂಡಿಗಳ ನಿರ್ವಹಣೆಗೆ ತೊಂದರೆಯಾಗದಂತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಯಾವುದೇ ಅಡಚಣೆ ಉಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾಫಿಕ್ ಪೊಲೀಸ್ ಕ್ಯಾಬಿನ್‌ಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಮಹೇಶ್ವರ್ ರಾವ್, ಸೂಕ್ತ ಪರ್ಯಾಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಸ್ಥಳಾಂತರಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಂಚಾರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಅದೇ ರೀತಿ, ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ಬೆಸ್ಕಾಂನ ರಿಂಗ್ ಮೇನ್ ಯುನಿಟ್ (ಆರ್‌ಎಂಯು) ಉಪಕರಣಗಳನ್ನು ಸಮೀಪದ ಆಸ್ತಿಗಳ ಆವರಣದೊಳಗೆ ಸ್ಥಳಾಂತರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಕೆ
ರಸ್ತೆ ಪರಿಶೀಲನೆ ವೇಳೆ ಹಲವು ಕಡೆಗಳಲ್ಲಿ ಪಾದಚಾರಿ ಮಾರ್ಗದ ಚರಂಡಿಗಳ ಮೇಲಿನ ಸ್ಲ್ಯಾಬ್‌ಗಳು ಇಲ್ಲದಿರುವುದು ಕಂಡುಬಂದಿದೆ. ಇದರಿಂದ ಪಾದಚಾರಿಗಳಿಗೆ ಅಪಾಯ ಎದುರಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ತಕ್ಷಣ ಹೊಸ ಸ್ಲ್ಯಾಬ್‌ಗಳನ್ನು ಅಳವಡಿಸಿ ತೆರೆದ ಚರಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದರು.

























