
ತುಮಕೂರು, ಸೆ. ೩- ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ನಗರ ಶಾಖೆಯಲ್ಲಿ ೯ನೇ ಸಂಸ್ಥಾಪನಾ ದಿನಾಚರಣೆ ನಡೆಯಿತು. ಜಿಲ್ಲಾಧಿಕಾರಿ ಶುಭಾಕಲ್ಯಾಣ್ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ವಿಮಾ ಯೋಜನೆಯಡಿ ಪರಿಹಾರದ ಚೆಕ್ ವಿತರಿಸಿದರು.
ಅಪಘಾತದಲ್ಲಿ ಮೃತಪಟ್ಟ ತುಮಕೂರು ತಾಲ್ಲೂಕು ಓಬಳಾಪುರ ಗ್ರಾಮದ ಮಲ್ಲೇಶಯ್ಯ ಅವರ ಕುಟುಂಬದವರಿಗೆ ’ನಿವಾ ಬೂಪಾ’ ಅಪಘಾತ ವಿಮಾ ಯೋಜನೆಯಡಿ ೧೦ ಲಕ್ಷ ರೂಪಾಯಿಗಳ ಚೆಕ್‌ಅನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.
ಮಲ್ಲೇಶಯ್ಯ ಅವರು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವಾರ್ಷಿಕ ಕೇವಲ ೫೪೯ ರೂಪಾಯಿ ಪ್ರೀಮಿಯಂ ಪಾವತಿಸಿ ಗ್ರೂಪ್ ಆಕ್ಸಿಡೆಂಟ್ ಇನ್ಷೂರೆನ್ಸ್ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರು. ದುರಾದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ, ಯೋಜನೆಯ ನಿಯಮಾನುಸಾರ ಅವರ ನಾಮಿನಿಯಾಗಿರುವ ಪತ್ನಿ ಪಿ.ಲಲಿತಮ್ಮ ಅವರಿಗೆ ೧೦ ಲಕ್ಷ ರೂಪಾಯಿ ವಿಮಾ ಪ್ರೈಮ್ ಮಂಜೂರಾಯಿತು. ಈ ವಿಮಾ ಕ್ರೈಮ್ ಚೆಕ್‌ಅನ್ನು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಿ.ಎಚ್.ಚೈತನ್ಯ ಕುಮಾರ್ ಅವರು ಫಲಾನುಭವಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಐಪಿಪಿಬಿಯು ಗ್ರಾಮೀಣ ಜನರ ಆರ್ಥಿಕ ಸೇರ್ಪಡೆ, ಅಂಚೆ ಇಲಾಖೆ ಡಿಜಿಟಲೀಕರಣ, ಮನೆ ಬಾಗಿಲಿಗೆ ಅಂಚೆ ಸೇವೆ ನೀಡುತ್ತಿರುವ ಕುರಿತು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ತುಮಕೂರು ವಿಭಾಗದ ಸಹಾಯಕ ಅಂಚೆ ಅಧೀಕ್ಷಕರು, ಎಲ್ಲಾ ಅಂಚೆ ನಿರೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.


































