Home ಮುಖಪುಟ ಸುದ್ದಿ ನೇಪಾಳ ಪ್ರವಾಹಕ್ಕೆ ೭೩೪ಕ್ಕೂ ಹೆಚ್ಚು ಬಲಿ; ೩೦೦೦ ಮಂದಿ ನಾಪತ್ತೆ

ನೇಪಾಳ ಪ್ರವಾಹಕ್ಕೆ ೭೩೪ಕ್ಕೂ ಹೆಚ್ಚು ಬಲಿ; ೩೦೦೦ ಮಂದಿ ನಾಪತ್ತೆ

ಕಠ್ಮಂಡು,ಆ.೩೦: ನೇಪಾಳದಲ್ಲಿ ಸಂಭವಿಸಿದ ಪ್ರಚಂಡ ಹಿಮನದಿ ಕುಸಿತ ಹಾಗೂ ಮೇಘಸ್ಫೋಟದಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ ೭೩೪ಕ್ಕೇರಿದೆ. ಪ್ರವಾಹ ಹಾಗೂ ಸರಣಿ ಭೂಕುಸಿತದ ಪರಿಣಾಮ ಸುಮಾರು ೨,೫೦೦ಕ್ಕೂ ಹೆಚ್ಚು ಜನರು ಸುಳಿವೇ ಇಲ್ಲದೆ ಕಾಣೆಯಾಗಿದ್ದಾರೆ. ಇವರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ ೨೭೫ಕ್ಕೂ ಹೆಚ್ಚು ಭಾರತೀಯ ಯಾತ್ರಿಕರೂ ಸೇರಿದ್ದಾರೆ.


ಭಾರತ ಮತ್ತು ಚೀನಾ ಗಡಿಗೆ ಹೊಂದಿಕೊಂಡಿರುವ ರಸುವಾ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ನೂರಾರು ಮನೆಗಳು, ಸೇತುವೆಗಳು, ಜಲವಿದ್ಯುತ್ ಯೋಜನೆಗಳು ಪ್ರವಾಹದ ಅಬ್ಬರಕ್ಕೆ ಕೊಚ್ಚಿಹೋಗಿದ್ದು, ಇಡೀ ಪ್ರದೇಶ ಕೆಸರುಮಯವಾಗಿದೆ.ರಸುವಾದಲ್ಲಿ ನಿರ್ಮಾಣ ಹಂತದಲ್ಲಿರುವ ‘ಅಪ್ಪರ್ ತ್ರಿಶೂಲಿ-೧’ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ೧೦೦ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಸೇನೆ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳು ಕಾರ್ಯಾಚರಣೆ ಮುಂದುವರಿಸಿವೆ.


ಭಾರತದಿಂದ ೧೧ ಸದಸ್ಯರ ವೈದ್ಯಕೀಯ ಮತ್ತು ಸುರಂಗ ರಕ್ಷಣಾ ತಜ್ಞರ ತಂಡ ನೇಪಾಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದೆ. ೬೮.೫ ಟನ್‌ಗೂ ಹೆಚ್ಚು ಪರಿಹಾರ ಸಾಮಗ್ರಿ, ಔಷಧ, ತಾತ್ಕಾಲಿಕ ಸೇತುವೆಗಳ (ಬೇಲಿ ಬ್ರಿಡ್ಜ್) ನಿರ್ಮಾಣಕ್ಕೆ ಅಗತ್ಯವಿರುವ ಉಪಕರಣಗಳನ್ನು ಭಾರತೀಯ ವಾಯುಸೇನೆಯ ವಿಮಾನಗಳ ಮೂಲಕ ತಲುಪಿಸಲಾಗಿದೆ. ಸದ್ಯ ೩,೭೦೦ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು, ೫೯೮ ಭಾರತೀಯರು ಚೀನಾದಿಂದ ಸುರಕ್ಷಿತವಾಗಿ ನೇಪಾಳ ಗಡಿ ಪ್ರವೇಶಿಸಿದ್ದಾರೆ. ಸುಮಾರು ೯೦೦ ಭಾರತೀಯರು ಚೀನಾ ಗಡಿಯಲ್ಲಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಹಾಗೂ ರಸ್ತೆಗಳು ಸಂಪೂರ್ಣ ಧ್ವಂಸಗೊಂಡಿವೆ. ಆಸ್ಪತ್ರೆಗಳಲ್ಲಿ ತುರ್ತು ಔಷಧಗಳು ಮತ್ತು ಇಂಧನದ ಅಭಾವ ಎದುರಾಗಿದ್ದು, ಸಂಕಷ್ಟದಲ್ಲಿರುವ ಜನರು ಕಲುಷಿತ ನೀರನ್ನು ಬಳಸುವಂತಾಗಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.


ಸಇನ್ನೊಂದೆಡೆ, ಸಂವಹನ ವ್ಯವಸ್ಥೆ ಕಡಿದುಬಿದ್ದಿರುವುದರಿಂದ ರಕ್ಷಣಾ ಕಾರ್ಯಕ್ಕೆ ಉಚಿತ ಉಪಗ್ರಹ ಅಂತರ್ಜಾಲ (ಸ್ಟಾರ್‌ಲಿಂಕ್) ಸೇವೆ ಒದಗಿಸಲು ಸಿದ್ಧವಿರುವುದಾಗಿ ಎಲಾನ್ ಮಾಸ್ಕ್ ಅವರ ಸಂಸ್ಥೆ ಪ್ರಕಟಿಸಿದೆ. ಕಠಿಣ ಹವಾಮಾನ ಮತ್ತು ಕೆಸರಿನ ನಡುವೆಯೂ ರಕ್ಷಣಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.