Home ಜಿಲ್ಲೆ ನಾಳೆ ಕೂಡ್ಲಿಗಿ ಬಂದ್. ವಿವಿಧ ಸಂಘಟನೆಗಳಿಂದ ಬರಪೀಡಿತ  ತಾಲೂಕು ಘೋಷಣೆಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯ.

ನಾಳೆ ಕೂಡ್ಲಿಗಿ ಬಂದ್. ವಿವಿಧ ಸಂಘಟನೆಗಳಿಂದ ಬರಪೀಡಿತ  ತಾಲೂಕು ಘೋಷಣೆಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯ.

ಕೂಡ್ಲಿಗಿ. ಆ. 30 :-ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ  ಇತ್ತೀಚಿಗೆ ರಾಜ್ಯ  ಸರ್ಕಾರವು 110 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದ್ದು ಮುಖ್ಯವಾಗಿ ಬರದ ನಾಡದ ಕೂಡ್ಲಿಗಿ ತಾಲೂಕನ್ನು ಸರ್ಕಾರವು ಕೈಬಿಟ್ಟ ಪರಿಣಾಮ ತಾಲೂಕಿನ ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಆಗ್ರಹಿಸಿ ನಾಳೆ ಕೂಡ್ಲಿಗಿ ಬಂದ್ ಕರೆ ನೀಡಿದ್ದು ಪಟ್ಟಣದ ಅಂಗಡಿ ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಕರೆಗೆ ಸಹಕಾರ ನೀಡಲಿದ್ದಾರೆ ಎಂದು ತಿಳಿದಿದೆ.

ನೀರಾವರಿ ಮೂಲವನ್ನೇ ಕಾಣದ ಕೂಡ್ಲಿಗಿ ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದ್ದು ಮಳೆಯನ್ನೇ ನಂಬಿ ಬದುಕುವ ರೈತರು ತಾಲೂಕಿನಲ್ಲಿ ಈ ಬಾರಿ ಸಕಾಲಕ್ಕೆ ಮಳೆ ಬಾರದೆ ಮುಂಗಾರು ಕೈಕೊಟ್ಟಿದ್ದು ಅಲ್ಲದೆ ಸುರಿದ ಅಲ್ಪ ಮಳೆಗೆ ಬಿತ್ತಿದ ಬೆಳೆಗಳು ಸಹ ಒಣಗುವ ಹಂತ ತಲುಪಿವೆ ಬೆಳೆ ಬಾರದೆ ರೈತ ಕಂಗಲಾಗಿ ಗುಳೇ ಹೋಗುತ್ತಿರುವ ಘಟನೆ ಕಣ್ಣ ಮುಂದೆ ಕಾಣುತ್ತಿದೆಯಾದರೂ ಈ ಬಗ್ಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಜನರ ವಾಸ್ತವದ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದರೂ ನೀರಾವರಿ ಮೂಲಗಲಿರುವ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ಯಂತಹ ತಾಲೂಕುಗಳನ್ನು ಬರದ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಘೋಷಣೆ ಮಾಡಲಾಗಿದೆ ಆದರೆ ಮಳೆಯನ್ನೇ ನಂಬಿದ ಹಾಗೂ ಹಳೆಯ ಮಳೆಮಾಪನ ಆಧಾರ ಪಡೆದುಕೊಂಡು ಬರದ ಪಟ್ಟಿಯಿಂದ ಬರದ ನಾಡು ಕೂಡ್ಲಿಗಿ ತಾಲೂಕನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡದೇ ಇದ್ದು ಸರ್ಕಾರದ ಈ ನಡೆ   ಸಮಂಜಸವಾದುದಲ್ಲ ತಕ್ಷಣ ರೈತರ ಗೋಳು, ಮಳೆಯಾಶ್ರಿತ ಪ್ರದೇಶ ನೀರಾವರಿ ಮೂಲವಿಲ್ಲದ, ತುತ್ತಿನ ಚೀಲ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ಕುಟುಂಬಗಳು  ಗುಳೇ ಹೋಗುತ್ತಿದ್ದಾರೆ ಇದನ್ನೆಲ್ಲಾ ಮನಗಂಡು ಸರ್ಕಾರವು ಕೂಡ್ಲಿಗಿ ತಾಲೂಕು ಬರಪೀಡಿತ  ತಾಲೂಕು ಎಂದು ಘೋಷಣೆ ಮಾಡಲೇಬೇಕು ಎಂದು ವಿವಿಧ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ನಾಳೆ ಬಂದ್ ಕರೆ ನೀಡಿದ್ದು ರೈತಪರವಾಗಿ  ನಿಂತ ವ್ಯಾಪಾರಸ್ಥರು, ಅಂಗಡಿ ಮಾಲೀಕರು ನಾಳಿನ ಬಂದ್ ಕರೆಗೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ನಾಳೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಬಂದ್ ಮಾಡಿ ಸಂಪೂರ್ಣ ಬೆಂಬಲ ನೀಡಿದ್ದಾರೆ.

ಅಧಿಕಾರಿಗಳ ಸಭೆ ವಿಫಲ : ನಾಳೆ ಬಂದ್ ಮಾಡುವುದು ಬೇಡ ಸರ್ಕಾರಕ್ಕೆ ವರದಿ ಕಳುಹಿಸಿ ಕೂಡ್ಲಿಗಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುತ್ತೇವೆ ಎಂದು ಬಂದ್ ಕರೆ ನೀಡಿದ ಸಂಘಟಕರನ್ನು ಕರೆದು ತಹಸೀಲ್ದಾರ್, ಡಿವೈಎಸ್ಪಿ ಸಭೆ ಕರೆದು ಬಂದ್ ವಾಪಸ್ಸು ಪಡೆಯುವಂತೆ ಮನವೊಲಿಸಲು ಮುಂದಾದಾಗ ಯಾವುದಕ್ಕೂ ಒಪ್ಪದ ರೈತಪರ ಹಾಗೂ ವಿವಿಧ ಸಂಘಟನೆಯ ಸಂಘಟಕರು ಸಭೆಯಿಂದ ಹೊರಬಂದು ನಾಳೆ ಬಂದ್ ಖಚಿತ ಎಂದು ತಿಳಿಸುತ್ತಾ ಅಂಗಡಿ ಮುಂಗಟ್ಟು ಮಾಲೀಕರಿಗೆ ಬಂದ್ ಗೆ ಸಹಕರಿಸುವಂತೆ ಕೋರಿದ್ದರಿಂದ ಅಂಗಡಿ ಮಾಲೀಕರು  ಬೆಂಬಲ ವ್ಯಕ್ತಪಡಿಸುವ ಭರವಸೆ ನೀಡಿದರು.