Home ಮುಖಪುಟ ಸುದ್ದಿ ಕೆಪಿಎಸ್‌ಸಿ ಅಕ್ರಮ ತಡೆಯಲು ಸರ್ಕಾರ ವಿಫಲ: ಎಚ್‌ಡಿಕೆ ಕಿಡಿ

ಕೆಪಿಎಸ್‌ಸಿ ಅಕ್ರಮ ತಡೆಯಲು ಸರ್ಕಾರ ವಿಫಲ: ಎಚ್‌ಡಿಕೆ ಕಿಡಿ

ಬೆಂಗಳೂರು, ಆ. ೩೦- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಲೋಪಗಳನ್ನು ಸರಿಪಡಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ರಾಜ್ಯ ಕಚೇರಿಯಲ್ಲಿಂದು ತುರ್ತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಪಿಎಸ್‌ಸಿ ನಡೆಸಿದ ಎಇಇ (ಸಹಾಯಕ ಕಾರ್ಯಪಾಲಕ ಅಭಿಯಂತರರು) ಹಾಗೂ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಾರ್ವಜನಿಕವಾಗಿ ಕೆಪಿಎಸ್‌ಸಿ ಸಂಸ್ಥೆಯ ಬಗ್ಗೆ ಅಸಹ್ಯಕರ ಭಾವನೆ ಮೂಡಿದೆ. ಸಂಸ್ಥೆಯು ವಿದ್ಯಾರ್ಥಿಗಳ ಮತ್ತು ಉದ್ಯೋಗಾಕಾಂಕ್ಷಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು, ಅರ್ಹ ಹಾಗೂ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು ಪಟ್ಟಿಯ ಕೊನೆಗೆ ತಳ್ಳಲ್ಪಡುತ್ತಿದ್ದಾರೆ.

“ನನಗೆ ಸಂಪೂರ್ಣ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ” ಎಂದು ಹಿಂದೆ ಹೇಳಿಕೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಗುರಿಯಾಗಿಸಿದ ಹೆಚ್‌ಡಿಕೆ, “ಈಗ ನಿಮ್ಮದೇ ಅಧಿಕಾರವಿದೆ, ಸಂಸ್ಥೆಯನ್ನು ಸರಿಪಡಿಸಲು ಅಥವಾ ರದ್ದು ಮಾಡಲು ನಿಮಗೇನು ತೊಂದರೆ ಎಂದು ಪ್ರಶ್ನಿಸಿದರು.

ನಾನು ಸಿಎಂ ಆಗಿದ್ದಾಗ ಯಾವುದೇ ಕಾನೂನುಬಾಹಿರ ನಿರ್ದೇಶನಗಳನ್ನು ನೀಡಿಲ್ಲ. ೨೦೦೬ರಲ್ಲಿ ನನ್ನ ಆಪ್ತರಿಗಾಗಲಿ ಅಥವಾ ಸಂಬಂಧಿಕರಿಗಾಗಲಿ ಮಣೆ ಹಾಕದೆ, ದಲಿತ ಸಮುದಾಯದ ಪ್ರಾಮಾಣಿಕ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ಮಾಡಿದ್ದೆ ಎಂಬುದನ್ನು ಸ್ಮರಿಸಿದರು.

೨೦೧೩ರಿಂದಲೂ ಕೆಪಿಎಸ್‌ಸಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಸಂಸ್ಥೆಯಲ್ಲಿರುವ ಐಎಎಸ್ ಅಧಿಕಾರಿಗಳು ಹಾಗೂ ಅಕ್ರಮ ಎಸಗಿದವರ ಮೇಲೆ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಕೇವಲ ಹೇಳಿಕೆಗಳನ್ನು ನೀಡದೆ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ವಾಲ್ಮೀಕಿ ನಿಗಮದ ೮೭ ಕೋಟಿ ರೂ. ಅಕ್ರಮ ಹಾಗೂ ’ಗೃಹಲಕ್ಷ್ಮಿ’ ಯೋಜನೆಯ ಸುಮಾರು ೫,೦೦೦ ಕೋಟಿ ರೂ. ಅನುದಾನದ ಬಳಕೆಯ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆ ಕುರಿತು ಮಾತನಾಡಿದ ಅವರು, “ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ನಂತರವೂ ಪಾದಯಾತ್ರೆ ಹಮ್ಮಿಕೊಂಡಿರುವ ಉದ್ದೇಶದ ಬಗ್ಗೆ ನನ್ನೊಂದಿಗೆ ಚರ್ಚಿಸಿಲ್ಲ. ನಾನು ಪೂರ್ವನಿಯೋಜಿತ ಕಾರ್ಯಕ್ರಮಗಳ ನಿಮಿತ್ತ ಸೆಪ್ಟೆಂಬರ್ ೧೨ ರವರೆಗೆ ಲಭ್ಯವಿರುವುದಿಲ್ಲ. ಹೀಗಾಗಿ ಪಾದಯಾತ್ರೆಯಲ್ಲಿ ನಾನು ಭಾಗವಹಿಸುತ್ತಿಲ್ಲ; ಆದರೆ ನಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಸಾಂಕೇತಿಕವಾಗಿ ಬೆಂಬಲ ನೀಡಲಿದ್ದಾರೆ” ಎಂದು ತಿಳಿಸಿದರು.

ಅಕ್ರಮಗಳ ವಿರುದ್ಧ ಮತ್ತು ಉದ್ಯೋಗಾಕಾಂಕ್ಷಿಗಳ ಪರವಾಗಿ ಜೆಡಿಎಸ್ ಸದಾ ಧ್ವನಿ ಎತ್ತಲಿದೆ ಎಂದು ಈ ಸಂದರ್ಭದಲ್ಲಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಅಧಿಕಾರಿ ಮಾಡಿರುವ ಅಕ್ರಮ ಬಹಿರಂಗಪಡಿಸುತ್ತೇನೆ.”


“ನನ್ನ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಅಧಿಕಾರಿಯೊಬ್ಬರು ಎಂತಹ ಶಬ್ದಗಳನ್ನು ಬಳಸಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ನಾನು ಆ ಅಧಿಕಾರಿ ಮಾಡಿರುವ ಅಕ್ರಮಗಳೇನು ಎಂಬುದನ್ನು ಬಹಿರಂಗಪಡಿಸುತ್ತೇನೆ.”
ನಾನು ಈಗ ’ಅಕ್ಕ’ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕಾಗೆ ತೆರಳುತ್ತಿದ್ದೇನೆ. ೧೦ ದಿನಗಳ ನಂತರ ರಾಜ್ಯಕ್ಕೆ ಮರಳಿ ಬಂದು ಮಾಧ್ಯಮಗಳ ಮುಂದೆ ಮಾತನಾಡುತ್ತೇನೆ ಎಂದರು.


ಮರಳಿ ಬಂದ ಮೇಲೆ ಇಡೀ ದೇಶದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಸುವಂತಹ ವಿಷಯವನ್ನು ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಜನರ ಮುಂದಿಡುತ್ತೇನೆ. ಆ ಬಳಿಕ ಕುಮಾರಸ್ವಾಮಿ ಏನೆಂಬುದು ಎಲ್ಲರಿಗೂ ಗೊತ್ತಾಗಲಿದೆ. ಅಷ್ಟೇ ಅಲ್ಲ, ನಿಮಗೆ ದಿನಕ್ಕೊಂದು ಸುದ್ದಿಯನ್ನು ನೀಡುತ್ತೇನೆ ಎಂದು ಹೇಳಿದರು.

’ಕುಮಾರಸ್ವಾಮಿ ಅವರ ಚರಿತ್ರೆ ಬಿಚ್ಚಿಡುವುದಿಲ್ಲ’ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ತಿರುಗೇಟು ನೀಡಿದ ಅವರು ನನ್ನ ಬಗ್ಗೆ ಅವರು ಯಾವ ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ ನಾನೇನೂ ಬೇನಾಮಿ ವ್ಯಾಪಾರ ಮಾಡಿಲ್ಲ.””ನಾನು ರಾಜಕೀಯಕ್ಕೆ ಬರುವ ಮುಂಚೆಯೇ ಎಲ್ಲೋ ೪೬ ಎಕರೆ ಜಮೀನು ಖರೀದಿಸಿದ್ದೆ, ಅಷ್ಟೇ. ಆದರೆ, ಅಲ್ಲೂ ನನ್ನನ್ನು ನೆಮ್ಮದಿಯಾಗಿರಲು ಬಿಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.