Home ಮುಖಪುಟ ಸುದ್ದಿ ಗಜಪಡೆಗೆ ತೂಕ ಪರೀಕ್ಷೆ

ಗಜಪಡೆಗೆ ತೂಕ ಪರೀಕ್ಷೆ

ಮೈಸೂರು, ಆ.೩೦: ನಾಡಹಬ್ಬ ಮೈಸೂರು ದಸರಾ ೨೦೨೬ರ ಪ್ರಯುಕ್ತ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಯ ತೂಕ ಪರೀಕ್ಷೆಯನ್ನು ಇಂದು ಬೆಳಗ್ಗೆ ಯಶಸ್ವಿಯಾಗಿ ನಡೆಸಲಾಯಿತು ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.


ನಗರದ ಧನ್ವಂತರಿ ರಸ್ತೆಯ ಸಾಯಿರಾಮ್ ತೂಕದ ಕೇಂದ್ರದಲ್ಲಿ ಬೆಳಗ್ಗೆ ೯ ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಹಾಗೂ ಮಾವುತರು ಉಪಸ್ಥಿತರಿದ್ದರು.


ಶ್ರೀಕಾಂತ ಆನೆ ೫೭೯೦ ಕೆಜಿ ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿದ್ದು, ಕಾವೇರಿ ಆನೆ ೩೦೭೫ ಕೆಜಿ ತೂಕದೊಂದಿಗೆ ಕಡಿಮೆ ತೂಕ ಹೊಂದಿದೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದ್ದಾರೆ.


ಡಿಸಿಎಫ್ ಪ್ರಭುಗೌಡ ನೀಡಿದ ತೂಕದ ಪಟ್ಟಿ:


ಶ್ರೀಕಾಂತ – ೫೭೯೦ ಕೆಜಿ
ಏಕಲವ್ಯ – ೫೬೦೦ ಕೆಜಿ
ಧನಂಜಯ – ೫೫೩೦ ಕೆಜಿ
ಮಹೇಂದ್ರ – ೫೪೯೦ ಕೆಜಿ
ಪ್ರಶಾಂತ – ೫೨೦೫ ಕೆಜಿ
ಗೋಪಿ – ೫೧೭೦ ಕೆಜಿ
ಶ್ರೀರಾಮ – ೪೮೨೦ ಕೆಜಿ
ಲಕ್ಷ್ಮಿ – ೩೯೯೦ ಕೆಜಿ
ಕಾವೇರಿ – ೩೦೭೫ ಕೆಜಿ


ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ಜಂಬೂ ಸವಾರಿಗೆ ಸಿದ್ಧವಾಗಿವೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.


ದಸರಾ ಆನೆ ವೀಕ್ಷಣೆಗೆ ಇ-ಟಿಕೆಟ್ ಇಲ್ಲ:


ದಸರಾ ಗಜಪಡೆ ಆ.೨೮ರಿಂದ ಅರಮನೆ ಆವರಣದ ಶಿಬಿರದಲ್ಲಿ ಬೀಡುಬಿಟ್ಟಿದ್ದು, ಆನೆಗಳ ವೀಕ್ಷಣೆಗೆ ಅರಣ್ಯ ಇಲಾಖೆ ಇ-ಟಿಕೆಟಿಂಗ್ ಆರಂಭಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್, ಆನೆ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಇಲ್ಲ ಎಂದು ಹೇಳಿದ್ದಾರೆ.
ಇ-ಟಿಕೆಟಿಂಗ್ ಪ್ರಸ್ತಾವನೆ ಕೇವಲ ಚಿಂತನಾ ಹಂತದಲ್ಲಿತ್ತು. ಅದನ್ನು ಜಾರಿಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.