
ಕೆ.ಆರ್.ಪುರ,ಆ.೧೮-ಮಹದೇವಪುರ ಕ್ಷೇತ್ರದ ವರ್ತೂರು ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯನ್ನು ತಕ್ಷಣವೇ ಚುರುಕುಗೊಳಿಸಿ, ಗುಣಮಟ್ಟದೊಂದಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಥಳೀಯ ಮುಖಂಡ ಕುಪ್ಪಿ ಮಂಜುನಾಥ್ ಅವರು ಎಚ್ಚರಿಸಿದ್ದಾರೆ.
ವರ್ತೂರು ಗಾಂಧಿ ವೃತ್ತದಲ್ಲಿ ವರ್ತೂರು ಮುಖ್ಯರಸ್ತೆ ಹೋರಾಟ ಸಮಿತಿ ಹಾಗೂ ಸ್ಥಳೀಯ ನಾಗರಿಕರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕೆ.ಆರ್.ಡಿ.ಸಿ.ಎಲ್ ವಿಳಂಬ ಧೋರಣೆಗೆ ಆಕ್ರೋಶ
ರಸ್ತೆ ಅಗಲೀಕರಣ ಕಾಮಗಾರಿ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದ್ದು, ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿಗೆ ವೇಗ ನೀಡಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಸ್ತೆ ಅಗಲೀಕರಣ ನಡೆಯುತ್ತಿರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.
ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸಮರ್ಪಕ ಬ್ಯಾರಿಕೇಡ್‌ಗಳು ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು.
ರಸ್ತೆಯುದ್ದಕ್ಕೂ ನಿರಂತರವಾಗಿ ನೀರು ಸಿಂಪಡಿಸಿ ಧೂಳಿನ ಸಮಸ್ಯೆಯನ್ನು ಹದಗೆಡದಂತೆ ನೋಡಿಕೊಳ್ಳಬೇಕು.
ಸಾರ್ವಜನಿಕರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಪರ್ಯಾಯ ಹಾಗೂ ಸುರಕ್ಷಿತ ವಾಹನ ಸಂಚಾರ ವ್ಯವಸ್ಥೆ ಮಾಡಬೇಕು.
ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕು.
ಈ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಅನೇಕ ಪ್ರಮುಖ ಮುಖಂಡರು, ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

































