
ಬೆಂಗಳೂರು, ಮೇ.೧೮- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ತಿಂಗಳ ೨೦ ರಿಂದ ನಡೆಸಲಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲಸ ಮಾಡದಿದ್ದರೆ ವೇತನವಿಲ್ಲ ಎಂದು ನೌಕರರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಮುಷ್ಕರದಲ್ಲಿ ಭಾಗವಹಿಸುವ ನೌಕರರ ವಿರುದ್ಧ “ಕೆಲಸ ಮಾಡದಿದ್ದಾಗ ವೇತನವಿಲ್ಲ” ತತ್ವದಡಿ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಜೊತೆಗೆ ಮುಷ್ಕರದಲ್ಲಿ ಪಾಲ್ಗೊಂಡರೆ ವೇತನ ಕಡಿತ ಮಾಡುವುದಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ಒದಗಿಸುವುದು ನಿಗಮದ ಜವಾಬ್ದಾರಿಯಾಗಿದೆ. ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸೇವೆಯನ್ನು ಅಗತ್ಯ ಸೇವೆಗಳ ಕಾಯ್ದೆ ಅಡಿ ಎಸ್ಮಾ ತಂದಿರುವುದರಿಂದ ನೌಕರರು ಮುಷ್ಕರ ಹೂಡುವಂತಿಲ್ಲ ಹಾಗೂ ಯಾರೂ ಇದಕ್ಕೆ ಪ್ರಚೋದನೆ ನೀಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.
ಸರ್ಕಾರ ಸಾರಿಗೆ ನಿಗಮಗಳ ಸೇವೆಯನ್ನು“ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ” ಎಂದು ಘೋಷಿಸಿದೆ. ಸದ್ಯ ಮುಷ್ಕರದ ನೋಟಿಸ್ ಕುರಿತಾದ ವಿವಾದ ಕಾರ್ಮಿಕ ಆಯುಕ್ತರ ಮುಂದೆ ರಾಜೀ ಸಂಧಾನದಲ್ಲಿರುವುದರಿಂದ, ನಿಯಮಗಳ ಪ್ರಕಾರ ಸಂಧಾನ ಪ್ರಕ್ರಿಯೆ ನಡೆಯುತ್ತಿರುವಾಗ ನೌಕರರು ಮುಷ್ಕರ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.
ಮೇ ೨೦ ರಿಂದ ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ತಡೆಯಲು ನಿಗಮವು ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಈ ಕೆಳಗಿನ ನಿರ್ದೇಶನಗಳನ್ನು ನೀಡಿದೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ರಜೆಗಳ ರದ್ದು:
ಮೇ ೨೦ ರಿಂದ ಜಾರಿಗೆ ಬರುವಂತೆ ಅತ್ಯಂತ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು. ಅವಶ್ಯಕತೆ ಬಿದ್ದಲ್ಲಿ ವಾರದ ರಜೆಯನ್ನೂ ರದ್ದುಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಬಹುದು ಎಂದು ಹೇಳಿದ್ದಾರೆ.
ವೇತನ ಕಡಿತ ಮತ್ತು ಶಿಸ್ತು ಕ್ರಮ:
ಮುಷ್ಕರದ ಅವಧಿಯಲ್ಲಿ ಕೆಲಸಕ್ಕೆ ಗೈರುಹಾಜರಾಗುವ ನೌಕರರ ದಿನವಹಿ, ಘಟಕವಾರು ಪಟ್ಟಿಯನ್ನು ಸಿದ್ಧಪಡಿಸಿ, ಅಂದಿನ ವೇತನವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯಪೀಠದ ಆದೇಶದ ಅನ್ವಯ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರುಹಾಜರಾಗುವ ನೌಕರರ ವೇತನ ಕಡಿತದ ಜೊತೆಗೆ ಅವರ ವಿರುದ್ಧ ಇಲಾಖಾ ಶಿಸ್ತಿನ ಕ್ರಮ ಜರುಗಿಸಲು ಆಡಳಿತ ಮಂಡಳಿಗೆ ಪೂರ್ಣ ಅಧಿಕಾರವಿರುತ್ತದೆ.
ರಾಜ್ಯದ ಜನಸಾಮಾನ್ಯರ ಹಿತದೃಷ್ಟಿಯಿಂದ ನೌಕರರು ಯಾವುದೇ ಕಾರಣಕ್ಕೂ ಮುಷ್ಕರದಲ್ಲಿ ಭಾಗವಹಿಸದೆ, ತಮ್ಮ ದೈನಂದಿನ ಕರ್ತವ್ಯಕ್ಕೆ ಹಾಜರಾಗಬೇಕಾಗಿ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿ ತಿಳಿಸಿದೆ.
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ ೨೦ ರಿಂದ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ
- ನೌಕರರಿಗೆ .ಖಡಕ್ ಎಚ್ಚರಿಕೆ ನೀಡಿದ ಸಾರಿಗೆ ಸಂಸ್ಥೆ
- ಕೆಲಸ ಮಾಡದಿದ್ದಾಗ ವೇತನವಿಲ್ಲ ಖಡಕ್ ಸಂದೇಶ ರವಾನಿಸಿದ ಸರ್ಕಾರ
- ಮುಷ್ಕರದಲ್ಲಿ ಪಾಲ್ಗೊಂಡರೆ ವೇತನ ಕಡಿತದ ಎಚ್ಚರಿಕೆ
- ನ್ಯಾಯಾಲಯದ ಆದೇಶದ ಅನ್ವಯ ಕ್ರಮ
- ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನೌಕರರಿಗೆ ಯಾವುದೇ ರೀತಿಯ ರಜೆ ಮಂಜೂರು ರದ್ದು
- ಸರ್ಕಾರ ಸಾರಿಗೆ ನಿಗಮಗಳ ಸೇವೆಯನ್ನು“ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಎಂದು ಘೋಷಣೆ






















