
ಅಬುಧಾಬಿ.ಮೇ. ೧೬- ಭಾರತದ ಇಂಧನ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತದಲ್ಲಿನ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್‌ನಲ್ಲಿ ೩೦ ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹಿಸಲು ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಬುಧಾಬಿ ಭೇಟಿಯ ವೇಳೆ ಈ ಮಹತ್ವದ ಒಪ್ಪಂದಕ್ಕೆ ಅಂತಿಮ ರೂಪ ನೀಡಲಾಗಿದೆ.
ಪ್ರಧಾನಿ ಮೋದಿ ಹಾಗೂ ಯುಎಇ ಅಧ್ಯಕ್ಷ ಶೇಕ್ ಮಹಮದ್ ಬಿನ್ ಜಿಯಾದ್ ಅಲ್ ನಯಾನ್ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ ಇಂಧನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಒಮ್ಮತ ವ್ಯಕ್ತವಾಯಿತು.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಇಂಡಿಯನ್ ವ್ಯೂಹಾತ್ಮಕ ಸಹಯೋಗ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ ನಡುವೆ ನಡೆದ ವ್ಯೂಹಾತ್ಮಕ ಸಹಯೋಗ ಒಪ್ಪಂದ’ವನ್ನು ಎರಡೂ ದೇಶಗಳ ನಾಯಕರು ಸ್ವಾಗತಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತು ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆಯ ನಡುವೆ ಈ ಒಪ್ಪಂದವು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದರ ಜೊತೆಗೆ, ಭಾರತದಲ್ಲಿ ತಂತ್ರಾತ್ಮಕ ಅನಿಲ ಸಂಗ್ರಹಣಾ ವ್ಯವಸ್ಥೆ ಸ್ಥಾಪನೆ ಕುರಿತು ಉಭಯ ರಾಷ್ಟ್ರಗಳು ಸಹಕಾರ ನೀಡಲು ನಿರ್ಧರಿಸಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಹಾಗೂ ಯುಎಇ ನಡುವೆ ದೀರ್ಘಾವಧಿಯ ಎಲ್‌ಪಿಜಿ ಪೂರೈಕೆ ಒಪ್ಪಂದಕ್ಕೂ ಸ್ವಾಗತ ಸೂಚಿಸಲಾಗಿದೆ.
“ಭಾರತದ ಇಂಧನ ಭದ್ರತೆಯಲ್ಲಿ ಯುಎಇ ಪ್ರಮುಖ ಪಾಲುದಾರ” ಎಂದು ಎಂಇಎ ಹೇಳಿದ್ದು, ಕಚ್ಚಾ ತೈಲ, ಎಲ್‌ಎನ್‌ಜಿ ಹಾಗೂ ಎಲ್‌ಪಿಜಿ ಪೂರೈಕೆ ಸೇರಿದಂತೆ ಸಮಗ್ರ ಇಂಧನ ಸಹಭಾಗಿತ್ವಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ತಿಳಿಸಿದೆ.
ಇಂಧನ ಕ್ಷೇತ್ರದ ಹೊರತಾಗಿ ಬ್ಯಾಂಕಿಂಗ್, ಮೂಲಸೌಕರ್ಯ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಭಾರತಕ್ಕೆ ೫ ಶತಕೋಟಿ ಡಾಲರ್ ಹೂಡಿಕೆ ಘೋಷಣೆಯೂ ನಡೆದಿದೆ. ರಕ್ಷಣಾ ಸಹಕಾರ, ಸಮುದ್ರ ಮಾರ್ಗಗಳ ಭದ್ರತೆ, ಹಡಗು ನಿರ್ಮಾಣ ಹಾಗೂ ಆಧುನಿಕ ಗಣಕ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಹೊಸ ಒಪ್ಪಂದಗಳು ಸೇರಿವೆ.
ಇದೇ ವೇಳೆ, ಪಶ್ಚಿಮ ಏಷ್ಯಾದಲ್ಲಿನ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆ, ಹೊರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ನೌಕಾಯಾನ ಮತ್ತು ವ್ಯಾಪಾರ ಮಾರ್ಗಗಳ ನಿರಂತರ ಸಂಚಾರದ ಅಗತ್ಯತೆಯನ್ನು ಎರಡೂ ದೇಶಗಳು ಒತ್ತಿಹೇಳಿವೆ.


























