
ಕಲಬುರಗಿ,ಅ.14: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕನ್ನಡ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಕನ್ನಡ ವಿಮರ್ಶೆಯ ತಾತ್ವೀಕರಣ’ ವಿಷಯದ ಕುರಿತು ಮೂರು ದಿನಗಳ ಕಮ್ಮಟದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಸಬೀಹಾ ಭೂಮಿಗೌಡ ಅವರು, ಕೃತಿ ವಿಮರ್ಶೆಯನ್ನು ವೈಯಕ್ತಿಕ ನೆಲೆಯಲ್ಲಿ ಮಾಡುವುದಕ್ಕಿಂತ ಸಂಘಟಿತ ನೆಲೆಯಲ್ಲಿ ಮಂಥನ ಮತ್ತು ವಿಚಾರ ವಿನಿಮಯದ ಮೂಲಕ ನಡೆಸಿದಾಗ ಮಾತ್ರ ಸಾಹಿತ್ಯದ ಬಹುಸಾಧ್ಯತೆಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ವೈಯಕ್ತಿಕ ಇಚ್ಛಾಶಕ್ತಿ, ಗುರಿ ಮತ್ತು ಆಸಕ್ತಿಯ ಆಧಾರದ ಮೇಲೆ ಸಂಶೋಧನೆ ಹಾಗೂ ಕೃತಿ ವಿಮರ್ಶೆ ಮೊದಲಿನಿಂದಲೂ ನಡೆಯುತ್ತಿವೆ. ಆದರೆ, ಅವುಗಳ ಪ್ರಮಾಣ ಸೀಮಿತವಾಗಿದೆ. ಸಾಂಸ್ಥಿಕ ನೆಲೆಯಲ್ಲಿ ಇಂತಹ ಪ್ರಯತ್ನಗಳಿಗೆ ಪೆÇ್ರೀತ್ಸಾಹ ಮತ್ತು ಮಾರ್ಗದರ್ಶನ ದೊರೆತಾಗ ಅವುಗಳ ಪರಿಣಾಮಕಾರಿತ್ವ ಹೆಚ್ಚುತ್ತದೆ. ತಕ್ಷಣದ ಪ್ರಯೋಜನಕ್ಕಿಂತ ಮುಂದಿನ ಹತ್ತು ಹಲವು ವರ್ಷಗಳವರೆಗೆ ಮೌಲ್ಯಯುತ ಕೊಡುಗೆ ನೀಡುವ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವವಿದೆ. ವಿಮರ್ಶೆ ಮತ್ತು ಸೃಜನಶೀಲ ಬರವಣಿಗೆಯ ಚುರುಕುತನವನ್ನು ಬೆಳೆಸಲು ಇಂತಹ ಕಮ್ಮಟಗಳು ಸಹಕಾರಿಯಾಗುತ್ತವೆ. ಈ ಕಮ್ಮಟವು ವಿಸ್ತೃತ ಹುಡುಕಾಟದ ಮೊದಲ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲಿ ದೃಢವಾಗಿ ಮತ್ತು ಸ್ಪಷ್ಟವಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.
ಇಂದು ಸಾಹಿತ್ಯವನ್ನು ತುಂಡು ತುಂಡಾಗಿ ಅಧ್ಯಯನ ಮಾಡುವ ಪ್ರವೃತ್ತಿ ಅಪಾಯಕಾರಿಯಾಗಿದೆ. ಸಾಹಿತ್ಯ ವಿಮರ್ಶೆಯಲ್ಲಿನ ಪೂರ್ವಗ್ರಹಗಳನ್ನು ಗುರುತಿಸಿ, ಈಗಾಗಲೇ ಒಪ್ಪಿತವಾಗಿರುವ ವಿಚಾರಗಳನ್ನು ಮರುಪರಿಶೀಲಿಸುವ ಅಗತ್ಯವಿದೆ. ಪಠ್ಯಗಳ ಹೊಸ ಓದು, ಮರುಮೌಲ್ಯಮಾಪನ ಮತ್ತು ಸಂಶೋಧನೆಯಿಂದ ಹೊರಹೊಮ್ಮುವ ಹೊಸ ಸತ್ಯಗಳು ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಯಾವಾಗ ಸ್ಥಾನ ಪಡೆಯುತ್ತವೆ ಎಂಬ ಪ್ರಶ್ನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ವಿಮರ್ಶೆಯಲ್ಲಿ ಲೇಖಕರು, ಸಂಶೋಧಕರು ಮತ್ತು ಅನುವಾದಕರು ಬಳಸುವ ಭಾಷೆ ಹಾಗೂ ಪರಿಕಲ್ಪನೆಗಳಲ್ಲಿನ ಪೂರ್ವಗ್ರಹಗಳನ್ನು ಗುರುತಿಸುವುದು ಮುಖ್ಯ. ವಿಶೇಷವಾಗಿ ಸ್ತ್ರೀವಾದಿ ದೃಷ್ಟಿಕೋನವನ್ನು ಕಡೆಗಣಿಸುವುದು ಮತ್ತು ಮಹಿಳೆಯರ ಪ್ರಶ್ನೆಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ವಿಮರ್ಶಾ ವಲಯದ ಪ್ರಮುಖ ಸವಾಲುಗಳಾಗಿವೆ. ಯಾವುದೇ ವಿಚಾರದ ಪರಿಕಲ್ಪನೆಯನ್ನು ತಾತ್ವೀಕರಿಸುವ ಸಂದರ್ಭದಲ್ಲಿ ಹೆಚ್ಚು ಪ್ರಶ್ನೆಗಳನ್ನು ಕೇಳಿದಷ್ಟೂ ಅದರ ಕುರಿತು ಸ್ಪಷ್ಟತೆ ಮತ್ತು ಪರಿಹಾರದ ಸಾಧ್ಯತೆಗಳು ಹೆಚ್ಚುತ್ತವೆ. ಹೀಗಾಗಿ ಯುವ ಪೀಳಿಗೆ ಮತ್ತು ವಿಮರ್ಶಕರು ಈ ದಿಕ್ಕಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್. ಎನ್. ಮುಕುಂದರಾಜ್ ಅವರು ಮಾತನಾಡಿ, ಸಾಹಿತ್ಯ ವಿದ್ಯಾರ್ಥಿಗಳಲ್ಲಿ ವಿಮರ್ಶಾ ಪ್ರಜ್ಞೆ ಬೆಳೆಸುವುದು ಅತ್ಯಗತ್ಯ ಎಂದರು. ವಿಮರ್ಶೆಯು ಮನುಷ್ಯನನ್ನು ಪರಿಪಕ್ವಗೊಳಿಸುತ್ತದೆ. ಸಾಹಿತ್ಯದ ಅಕ್ಷರಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಸಾಹಿತ್ಯ ವಿದ್ಯಾರ್ಥಿಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿರ್ದೇಶಕ ಪೆÇ್ರ. ಬಸವರಾಜ ಎಂ. ಕೋಡಗುಂಟಿ ಹಾಗೂ ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮಲಿಂಗಪ್ಪ ಟಿ. ಬೇಗೂರು ಮಾತನಾಡಿದರು. ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥರಾದ ಪೆÇ್ರ. ಶಿವಗಂಗಾ ರುಮ್ಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂರು ದಿನಗಳ ಕಮ್ಮಟದಲ್ಲಿ ಹತ್ತು ಗೋಷ್ಠಿಗಳು, ಚರ್ಚೆಗಳು ಹಾಗೂ ಸಂವಾದ ಕಾರ್ಯಕ್ರಮಗಳು ನಡೆದವು. ರಾಜ್ಯದ ವಿವಿಧ ಭಾಗಗಳ ಸಾಹಿತಿಗಳು, ವಿದ್ವಾಂಸರು ಮತ್ತು ಚಿಂತಕರು ಭಾಗವಹಿಸಿ ಕನ್ನಡ ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು ಕಮ್ಮಟದ ಮೂರು ದಿನಗಳ ಅನುಭವ ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪೆÇ್ರ. ವಿಕ್ರಮ ವಿಸಾಜಿ, ಡಾ. ಅಪ್ಪಗೆರೆ ಸೋಮಶೇಖರ, ಡಾ. ರೋಹಿಣಾಕ್ಷ ಶಿರ್ಲಾಲು, ಡಾ.ವಿಜಯಕುಮಾರ್, ಡಾ.ರಾಜಶ್ರೀ ಸೇರಿದಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಸಂಶೋಧನಾ ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ರಾಜ್ಯದ ವಿವಿಧ ಭಾಗಗಳ ಶಿಬಿರಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಭಾಗವಹಿಸಿದ್ದರು.























