Home ಜಿಲ್ಲೆ ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಿಲ್ಲಾ ಉಸ್ತುವಾರಿ ನೇಮಕಕ್ಕೆ ನಿರ್ಧಾರ

ಸ್ಥಳೀಯ ಸಂಸ್ಥೆಗಳ ಚುನಾವಣೆ: ಜಿಲ್ಲಾ ಉಸ್ತುವಾರಿ ನೇಮಕಕ್ಕೆ ನಿರ್ಧಾರ

ಬೆಂಗಳೂರು, ಅ.೧೧- ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಪ್ರತಿ ಜಿಲ್ಲೆಗೂ ಉಸ್ತುವಾರಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಚನೆಗೆ ಬಿಜೆಪಿಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.


ರಾಜ್ಯದ ಸಹ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿಕೊಂಡಿರುವ ಕಾಸಂ ವೆಂಕಟೇಶ್ ಅವರ ಉಪಸ್ಥಿತಿಯಲ್ಲಿ ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎಸ್‌ಐಆರ್ ಫಾರಂ-೭, ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ವಿತರಣೆ, ಉಪಚುನಾವಣೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.


ಎಸ್‌ಐಆರ್ ಫಾರಂ-೭ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಚುನಾವಣಾ ಆಯೋಗದ ನಿಯಮಾನುಸಾರ ಫಾರಂ-೭ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಸರ್ಕಾರ ಪೊಲೀಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆಈ ವಿಚಾರದಲ್ಲಿ ರಾಜ್ಯ ಉಚ್ಚ ನ್ಯಾಯಾಲಯವೂ ಸರ್ಕಾರಕ್ಕೆ ಚಾಟಿ ಬೀಸಿದೆ.


ಇಷ್ಟಾದರೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ, ಭಾರತೀಯ ಜನತಾ ಪಾರ್ಟಿ ಸುಮ್ಮನೆ ಕೂರುವುದಿಲ್ಲ. ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕುವ ನಿರ್ಧಾರವನ್ನು ಕೋರ್ ಕಮಿಟಿ ಕೈಗೊಂಡಿದೆ ಎಂದು ವಿಜಯೇಂದ್ರ ಹೇಳಿದರು


ಪರ್ಮನೆಂಟ್ ರೆಸಿಡೆಂಟ್ ಸರ್ಟಿಫಿಕೇಟ್ ನೀಡುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಮುನ್ಸಿಪಲ್ ಕಮಿಷನರ್‌ಗಳಿಗೆ ನೀಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಇಂತಹ ಪ್ರಮಾಣಪತ್ರಗಳನ್ನು ವಿತರಿಸುವ ಅಧಿಕಾರವನ್ನು ತಹಶೀಲ್ದಾರ್ ಮತ್ತು ಅವರ ಮೇಲಿನ ಹಂತದ ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಬೇಕು.


ರಾಜ್ಯ ಸರ್ಕಾರ ತಕ್ಷಣ ಈ ನಿರ್ಧಾರವನ್ನು ಹಿಂಪಡೆಯಬೇಕು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದರ ಜೊತೆಗೆ ಚುನಾವಣಾ ಆಯೋಗದ ಗಮನಕ್ಕೂ ವಿಷಯವನ್ನು ತರಲು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿಸಿದರು.


ಉಪಚುನಾವಣೆಗೆ ಜೆಡಿಎಸ್ ಜೊತೆ ಸಮಾಲೋಚನೆ
ರಾಜ್ಯದಲ್ಲಿ ಉಪಚುನಾವಣೆ ಯಾವಾಗ ಬೇಕಾದರೂ ಘೋಷಣೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮೈತ್ರಿಯ ಸಮನ್ವಯದೊಂದಿಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಿಜಯೇಂದ್ರ ಹೇಳಿದರು.


ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಮೀಸಲಾತಿ ವರ್ಗಗಳನ್ನು ಪ್ರಕಟಿಸಿದೆ. ಆದರೆ, ಮೀಸಲಾತಿ ಪಟ್ಟಿಯಲ್ಲಿ ಕೆಲವು ಗೊಂದಲಗಳು ಕಂಡುಬರುತ್ತಿವೆ. ಕೆಲವು ನಿರ್ಧಾರಗಳು ಆಡಳಿತ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ರೂಪುಗೊಂಡಿವೆ ಎಂಬ ಆತಂಕವೂ ಇದೆ.


ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಚುನಾವಣೆ ನಡೆಸುವ ಇಚ್ಛಾಶಕ್ತಿ ಇದೆಯೇ ಎಂಬ ಅನುಮಾನ ಮೂಡುತ್ತದೆ. ಯಾವುದೇ ನೆಪಗಳನ್ನು ಮುಂದಿಟ್ಟುಕೊಂಡು ಚುನಾವಣೆ ಮುಂದೂಡುವ ಕುತಂತ್ರಕ್ಕೆ ಸರ್ಕಾರ ಮುಂದಾಗಬಾರದು ಎಂದು ವಿಜಯೇಂದ್ರ ಆಗ್ರಹಿಸಿದರು.


ಬಿಜೆಪಿ ಚುನಾವಣೆಯನ್ನು ಎದುರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಿದೆ. ಪ್ರತಿ ಜಿಲ್ಲೆಗೂ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಬೇಕು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಪ್ರತಿ ಜಿಲ್ಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯನ್ನು ತಕ್ಷಣ ರಚಿಸಬೇಕು ಎಂದು ಕೋರ್ ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.


ಪಕ್ಷದ ಹೊಸ ಉಸ್ತುವಾರಿಗಳು ಜವಾಬ್ದಾರಿ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕೋರ್ ಕಮಿಟಿಯನ್ನು ಮುಂದುವರಿಸಬೇಕೇ ಅಥವಾ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಬೇಕೇ ಎಂಬ ಬಗ್ಗೆ ಸಭೆಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗಿದೆ.


ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಇದೆ. ಈಗಾಗಲೇ ಅವರ ಗಮನಕ್ಕೆ ವಿಷಯವನ್ನು ತರಲಾಗಿದೆ. ಸೂಕ್ತ ಸಂದರ್ಭದಲ್ಲಿ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.


ಸ್ಟಿಂಗ್ ಆಪರೇಷನ್: ಸತ್ಯಾಸತ್ಯತೆ ಹೊರಬರಲಿ
ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್‌ಗಳ ವಿಚಾರದಲ್ಲಿ ಬಿಜೆಪಿ ಅನಗತ್ಯವಾಗಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಆಡಳಿತ ಪಕ್ಷದ ಸಚಿವರು ಮತ್ತು ಶಾಸಕರ ನಡುವಿನ ಆಂತರಿಕ ಕಚ್ಚಾಟ ಹಾಗೂ ಹಗ್ಗಜಗ್ಗಾಟದಿಂದಲೇ ಈ ಬೆಳವಣಿಗೆಗಳು ನಡೆಯುತ್ತಿವೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.


ಸ್ಟಿಂಗ್ ಆಪರೇಷನ್‌ಗಳ ಹಿಂದೆ ಯಾರಿದ್ದಾರೆ, ಅವುಗಳ ಉದ್ದೇಶವೇನು ಮತ್ತು ಅವುಗಳಲ್ಲಿ ಮಾಡಲಾಗಿರುವ ಆರೋಪಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ಮೊದಲು ಬಹಿರಂಗವಾಗಲಿ. ಅದರ ಸತ್ಯಾಸತ್ಯತೆ ಹೊರಬಂದ ಬಳಿಕ ಬಿಜೆಪಿ ಪ್ರತಿಕ್ರಿಯಿಸಲಿದೆ.


ಆದರೆ, ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರ ಮುಖದಲ್ಲಿ ಆತಂಕ ಕಾಣಿಸುತ್ತಿರುವುದು ಮಾತ್ರ ಸ್ಪಷ್ಟವಾಗಿದೆ. ರವಿ ಗಣಿಗ ಅವರು ಏನು ಹೇಳುತ್ತಾರೆ ಎಂಬುದನ್ನೂ ಗಮನಿಸುತ್ತಿದ್ದೇವೆ. ಈ ಬೆಳವಣಿಗೆಗಳ ಹಿಂದೆ ತಮ್ಮವರೇ ಇದ್ದಾರೆಯೇ ಎಂಬ ಅನುಮಾನ ಆಡಳಿತ ಪಕ್ಷದವರಲ್ಲಿಯೂ ಮೂಡಿರುವಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಚಾರಗಳು ಹೊರಬರಬಹುದು ಎಂದು ವಿಜಯೇಂದ್ರ ಹೇಳಿದರು.


ಕೆಪಿಎಸ್‌ಸಿ ನೇಮಕಾತಿ ಅಕ್ರಮ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
ಕೆಪಿಎಸ್‌ಸಿ ನೇಮಕಾತಿ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರೆ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪು ಮಾಡಿದವರು ಯಾರೇ ಆಗಿರಲಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.


ಪ್ರಿಯಾಂಕ್ ಖರ್ಗೆ ಅವರು ಈ ವಿಚಾರದಲ್ಲಿ ಬಿಜೆಪಿ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸುವ ಮೊದಲು, ತನಿಖೆಯ ವಿಚಾರದಲ್ಲಿ ಸರ್ಕಾರ ನಡೆದುಕೊಂಡಿರುವ ರೀತಿಯನ್ನು ಗಮನಿಸಬೇಕು. ಎಸ್‌ಐಟಿ ತನಿಖೆಗೆ ಸಂಬಂಧಿಸಿದ ಬೆಳವಣಿಗೆಗಳು ಹಾಗೂ ನ್ಯಾಯಾಲಯದ ಮೆಟ್ಟಿಲೇರಿರುವ ವಿಚಾರಗಳ ಬಗ್ಗೆಯೂ ಸರ್ಕಾರ ಸ್ಪಷ್ಟನೆ ನೀಡಬೇಕು.


ಕೆಪಿಎಸ್‌ಸಿ ವಿಚಾರದಲ್ಲಿ ನಮಗೆ ಯಾವುದೇ ಗೊಂದಲವಿಲ್ಲ. ಸತ್ಯ ಹೊರಬರಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂಬುದೇ ಬಿಜೆಪಿಯ ನಿಲುವು ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.