
ಕಲಬುರಗಿ ಅ.12: ನಗರದ ಅಡ್ವೋಕೇಟ್ ಕಾಲನಿಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಶರನ್ನವರಾತ್ರಿಯ ಪರ್ವಕಾಲದ ನಿಮಿತ್ತ ಹಮ್ಮಿಕೊಳ್ಳಲಾಗಿರುವ 10 ದಿನಗಳ ಶ್ರೀ ವರದಾನಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ಪೂಜ್ಯ ಚಂದ್ರಗುಂಡ ಶಿವಾಚಾರ್ಯರು ಉದ್ಘಾಟಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಶೀರ್ವಚನ ನೀಡುತ್ತಾ ಮಾತನಾಡಿದ ಅವರು,ಭಗವಂತನು ಮನುಷ್ಯನಿಗೆ ಶ್ರೇಷ್ಠವಾದ ಕಣ್ಣು, ಕೈ, ಕಾಲು ಮತ್ತು ನಾಲಿಗೆಯನ್ನು ನೀಡಿದ್ದಾನೆ. ಹತ್ತಿಯು ಸಂಸ್ಕಾರಗೊಂಡು ದಾರವಾಗಿ, ಬಟ್ಟೆಯಾದಾಗ ಮಾತ್ರ ಹೇಗೆ ಅದಕ್ಕೆ ಬೆಲೆ ಬರುತ್ತದೆಯೋ, ಹಾಗೆಯೇ ಭಗವಂತನು ನೀಡಿದ ಈ ದೇಹವನ್ನು ಸತ್ಕಾರ್ಯಗಳಿಗೆ ಬಳಸಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ. ಭಗವಂತ ಕೊಟ್ಟ ನಾಲಿಗೆಯನ್ನು ನಿಂದನೆಗೆ ಬಳಸದೆ, ಭಗವಂತನ ನಾಮಸ್ಮರಣೆ ಹಾಗೂ ಮಂತ್ರ ಪಠಣೆಗೆ ಬಳಸಬೇಕು ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ದಾನಮ್ಮ ದೇವಿಯ ಮಹಿಮೆಯನ್ನು ವಿವರಿಸಿದ ಶ್ರೀಗಳು, ದೇವಿಯ ಮೂಲ ಹೆಸರು ನಿಂಗಮ್ಮ. ಕಲ್ಯಾಣದಲ್ಲಿ ಪಂಚ ಬ್ರಹ್ಮರಾದ ಬಸವಾದಿ ಶರಣರು, ಅಲ್ಲಮಪ್ರಭು, ಸಿದ್ಧರಾಮ, ಚೆನ್ನಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಸಮ್ಮುಖದಲ್ಲಿ ಆಕೆಯಲ್ಲಿದ್ದ ದಾನಗುಣವನ್ನು ಮೆಚ್ಚಿ ದಾನಮ್ಮಎಂಬ ಬಿರುದನ್ನು ನೀಡಲಾಯಿತು ಎಂದರು.
ಈ ಸಂದರ್ಭದಲ್ಲಿ ಹೊನ್ನ ಕಿರಣಗಿಯ ಪೂಜ್ಯ ಚಂದ್ರಗುಂಡ ಶಿವಾಚಾರ್ಯರು, ಹಾಗೂ ಪುರಾಣಿಕರಾದ ಸಿದ್ಧಲಿಂಗಯ್ಯ ಶಾಸ್ತ್ರಿ, ನರೋಣಾ ಅವರನ್ನು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ, ಗೌರವಿಸಿದರು.
ಆರಂಭ ದಲ್ಲಿ ಚೇತನ ಹಿರೇಮಠ ಅವರು ಪ್ರಾರ್ಥನಾ ಗೀತೆ ಹಾಡಿದರು. ರೇವಣಸಿದ್ಧ ಹೂಗಾರ್ ಅವರು ತಬಲಾ ಸಾಥ್ ನೀಡಿದರು. ಟ್ರಸ್ಟ್ ನ ಗೌರವಾಧ್ಯಕ್ಷ ಜಿ ಎಸ್ ಬಿರಾದಾರ ಅವರು ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಮಂಜುನಾಥ ಜೇವರ್ಗಿ ಅವರು ವಂದಿಸಿದರು. ಸೋಮಶೇಖರ ಎಸ್ ರುಳಿ ಅವರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸುಭಾಷ್ ಕೋಣಿನ, ಶಿವರಾಜ ಮಂಗಲಗಿ. ಆರ್ ಜೆ ಭೂಸಾರೆ, ಅಶೋಕ್ ಜೇವರ್ಗಿ, ಎಸ್ ಜಿ ಪಾಟೀಲ ಓಕಳಿ, ಸಜ್ಜನಶೆಟ್ಟಿ , ಜಗದೇವಪ್ಪ ಭೂಸಾರೆ, ನರಸಿಂಹ ಮಾನಕರ, ಭೀಮಾಶಂಕರ ಇಂಗಳೇಶ್ವರ, ಸಿದ್ದು, ಶ್ರೀಶೈಲ ಪೂಜಾರಿ,ಮಹಿಳಾ ಸಂಘದ ಸದಸ್ಯೆಯರು ಸೇರಿದಂತೆ ಸುತ್ತ ಮುತ್ತಲಿನ ಕಾಲನಿಗಳ ನೂರಾರು ಸದ್ಭಕ್ತರು, ಯುವಕರು ಮಕ್ಕಳು ಭಾಗವಹಿಸಿದ್ದರು.
























