
ಗುರುಮಠಕಲ್.ಅ.12 ತಾಲೂಕಿನ ಬುದೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಭಾನುಪ್ರಕಾಶ್ ರೆಡ್ಡಿ ಹಾಗೂ ತರಬೇತಿ ಶಿಕ್ಷಕ ಬಾಲರಾಜ್ ಎಮ್ ಚಂಡರಕಿ ಅವರು ಎನ್‍ಎಲ್‍ಇಪಿಸಿ -2026 ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಲು ನವದೆಹಲಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳು, ಸಹಶಿಕ್ಷಕರು, ಎಸ್‍ಡಿಎಂಸಿ ಅಧ್ಯಕ್ಷರು, ಮಾಜಿ ಅಧ್ಯಕ್ಷ ಪಾಪಿ ರೆಡ್ಡಿ, ಭೀಮಪ್ಪ ಮನ್ನೆ, ವಿದ್ಯಾರ್ಥಿಯ ಪಾಲಕರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ಭಾನುಪ್ರಕಾಶ್ ರೆಡ್ಡಿ ಅವರು ಬೆಳೆ ಸಂರಕ್ಷಣಾ ಸಾಧನ ಎಂಬ ನವೀನ ಆಲೋಚನೆಯೊಂದಿಗೆ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದಾರೆ. ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಅವರು, ಕೃಷಿಯಲ್ಲಿ ಕಾಡುಪ್ರಾಣಿಗಳಿಂದ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ತಡೆಗಟ್ಟಲು ಸಹಕಾರಿಯಾಗುವ ಸಾಧನ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಶಿಕ್ಷಕರು, ಪಾಲಕರು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಪೆÇ್ರೀತ್ಸಾಹಿಸಿದರು.
























